ಬಿಜೆಪಿ ನೇತೃತ್ವದ NDA ಸ್ಪಷ್ಟ ಆಕಾರ ಅಥವಾ ಗಾತ್ರವಿಲ್ಲದ ಅಮೀಬಾ ಇದ್ದಂತೆ: ಉದ್ಧವ ಠಾಕ್ರೆ
ಮುಂಬೈ: ಬಿಜೆಪಿ ನೇತೃತ್ವದ NDA ನಿರ್ದಿಷ್ಟ ಆಕಾರ ಮತ್ತು ಗಾತ್ರದ ಕೊರತೆಯಿಂದಾಗಿ ಅಮೀಬಾ ಇದ್ದಂತಿದೆ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ ಠಾಕ್ರೆ ಅವರು ಟೀಕಿಸಿದ್ದಾರೆ.
ರವಿವಾರ ಮಹಾರಾಷ್ಟ್ರದ ಹಿಂಗೋಲಿಯಲ್ಲಿ ರ್ಯಾಲಿಯಲ್ಲಿ ಮಾತನಾಡುತ್ತಿದ್ದ ಠಾಕ್ರೆ, ‘ಇಂಡಿಯಾ’ಮೈತ್ರಿಕೂಟವು ದೇಶದಲ್ಲಿ ಪ್ರಜಾಪ್ರಭುತ್ವವನ್ನು ರಕ್ಷಿಸಲು ಬಯಸಿರುವ ರಾಷ್ಟ್ರವಾದಿ ಪಕ್ಷಗಳನ್ನು ಒಳಗೊಂಡಿದೆ. ಆದರೆ ಎನ್ ಡಿ ಎ ದಲ್ಲಿನ ಹೆಚ್ಚಿನ ಪಕ್ಷಗಳು ದ್ರೋಹಿಗಳು ಮತ್ತು ಇತರ ಪಕ್ಷಗಳನ್ನು ಒಡೆದು ಬಿಜೆಪಿಯ ಮಿತ್ರಪಕ್ಷಗಳನ್ನಾಗಿ ಸೇರಿದವರನ್ನು ಒಳಗೊಂಡಿವೆ. ಈಗಿನ ಎನ್ ಡಿ ಎ ನಿರ್ದಿಷ್ಟ ಆಕಾರ ಅಥವಾ ಗಾತ್ರವಿಲ್ಲದ ಅಮೀಬಾದಂತಿದೆ. ಇಂಡಿಯಾ ಮೈತ್ರಿಕೂಟವು ಎನ್ ಡಿ ಎ ಅನ್ನು ಸೋಲಿಸಲಿದೆ ಎಂದು ಹೇಳಿದರು.
ಇಂಡಿಯಾ ಮೈತ್ರಿಕೂಟವನ್ನು ‘ಘಮಂಡಿಯಾ (ಅಹಂಕಾರಿ)’ ಎಂದು ಕರೆಯಬೇಕೆಂದು ಹೇಳಿರುವ ಬಿಜೆಪಿ ನಾಯಕರ ವಿರುದ್ಧ ದಾಳಿ ನಡೆಸಿದ ಠಾಕ್ರೆ, ಎನ್ ಡಿ ಎ ಅನ್ನು ಸುಲಭವಾಗಿ ‘ಘಮ- ಎನ್ ಡಿ ಎ’ ಎಂದು ಕರೆಯಬಹುದು ಎಂದರು.
ಚಂದ್ರಯಾನ-3 ಚಂದ್ರನ ಮೇಲೆ ಇಳಿದಾಗ ಪ್ರಧಾನಿ ದಕ್ಷಿಣ ಆಫ್ರಿಕಾದಲ್ಲಿದ್ದರು. ಅವರು ರಾಷ್ಟ್ರಧ್ವಜವನ್ನು ಬೀಸುತ್ತಿದ್ದರು. ಅವರು ಯಾರನ್ನು ಪ್ರತಿನಿಧಿಸುತ್ತಿದ್ದರು... ಭಾರತ ಅಥವಾ ಇಂಡಿಯನ್ ಮುಜಾಹಿದಿನ್ ಅನ್ನೇ ಎಂದು ಪ್ರಶ್ನಿಸಿದರು.
ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿ ಯಾವುದೇ ಮಟ್ಟಕ್ಕೂ ಇಳಿಯಲು ಸಿದ್ಧವಾಗಿದೆ ಎಂದು ಆರೋಪಿಸಿದ ಠಾಕ್ರೆ, ‘ನಾನಿದನ್ನು ಹೇಳುತ್ತಿಲ್ಲ. 2024ರ ಚುನಾವಣೆಗಳಲ್ಲಿ ಗೆಲ್ಲಲು ಬಿಜೆಪಿ ಏನನ್ನೂ ಮಾಡಬಲ್ಲದು ಎಂದು ನರೇಂದ್ರ ಮೋದಿಯವರಿಗೆ ಆಪ್ತರಾಗಿದ್ದ ಜಮ್ಮು-ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ ಮಲಿಕ್ ಮತ್ತು ತೃಣಮೂಲ ಸಂಸದೆ ಮಹುವಾ ಮೊಯಿತ್ರಾ ಹೇಳಿದ್ದಾರೆ. ಅವರು 2019ರ ಪುಲ್ವಾಮಾ ಘಟನೆಯ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದಾರೆ ಮತ್ತು ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆಯ ಬಳಿಕ ಭಾರೀ ಪ್ರಮಾಣದಲ್ಲಿ ಕೋಮು ದಂಗೆಗಳು ನಡೆಯಬಹುದು ಎಂಬ ಭೀತಿಯನ್ನು ವ್ಯಕ್ತಪಡಿಸಿದ್ದಾರೆ ಎಂದರು.