ಬಿಜೆಪಿ ಶಾಸಕ ದೇವೇಂದ್ರ ಸಿಂಗ್ ರಾಣಾ ನಿಧನ
PC: x.com/TV9Bharatvarsh
ಶ್ರೀನಗರ: ಬಿಜೆಪಿ ಮುಖಂಡ ಹಾಗೂ ಜಮ್ಮು ಮತ್ತು ಕಾಶ್ಮೀರದ ನರ್ಗೋತಾ ಶಾಸಕ ದೇವೇಂದ್ರ ಸಿಂಗ್ ರಾಣಾ (59) ಗುರುವಾರ ಹರ್ಯಾಣದ ಫರಿದಾಬಾದ್ ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಇವರು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಅವರ ತಮ್ಮ. ಸಿಂಗ್ ಸಾವಿಗೆ ಕಾರಣ ತಿಳಿದು ಬಂದಿಲ್ಲ.
ಬಹುಕೋಟಿ ಉದ್ಯಮ ಸಾಮ್ರಾಜ್ಯವನ್ನು ಕಟ್ಟಿ ಬೆಳೆಸಿದ್ದ ರಾಣಾ, ಬಳಿಕ ಪ್ರಭಾವಿ ರಾಜಕೀಯ ಮುಖಂಡರಾಗಿ ರೂಪುಗೊಂಡರು. ಜಮ್ಮು ಪ್ರದೇಶದಲ್ಲಿ ಡೋಗ್ರಾ ಸಮುದಾಯದ ಧ್ವನಿ ಎನಿಸಿಕೊಂಡಿದ್ದರು. ನಗೋತ್ರಾ ಕ್ಷೇತ್ರದಿಂದ ಇತ್ತೀಚೆಗೆ ಜಮ್ಮು ಕಾಶ್ಮೀರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಮರು ಆಯ್ಕೆ ಹೊಂದಿದ್ದರು.
ಜಮ್ಮು ಕಾಶ್ಮೀರದ ಉಪ ಮುಖ್ಯಮಂತ್ರಿ ಸುರೀಂಧರ್ ಕುಮಾರ್ ಚೌಧರಿ ಎಕ್ಸ್ ಪೋಸ್ಟ್ನಲ್ಲಿ, "ಈ ಶುಭ ದಿನದಂದು ಈ ಸುದ್ದಿ ತೀರಾ ಖೇದ ತಂದಿದೆ. ಅವರ ಕುಟುಂಬಕ್ಕೆ ಮತ್ತು ತಮ್ಮನನ್ನು ಕಳೆದುಕೊಂಡ ಡಾ.ಜಿತೇಂದ್ರಸಿಂಗ್ ಜಿ ಅವರಿಗೆ ಸಂತಾಪ ಹೇಳುತ್ತಿದ್ದೇನೆ. ಅವರ ಕುಟುಂಬಕ್ಕೆ ಮತ್ತು ಪ್ರೀತಿಪಾತ್ರರಿಗೆ ಸಂತಾಪಗಳು. ಓಂ ಶಾಂತಿ" ಎಂದು ಹೇಳಿದ್ದಾರೆ.
ಬಿಜೆಪಿಯ ಜಮ್ಮು ಕಾಶ್ಮೀರ ಘಟಕ ಕೂಡಾ ರಾಣಾ ಅವರ ಅಕಾಲಿಕ ನಿಧನಕ್ಕೆ ಸಂತಾಪ ಸೂಚಿಸಿದ್ದು, ಇದು ಪಕ್ಷಕ್ಕೆ ಹಾಗೂ ಜಮ್ಮು ಕಾಶ್ಮೀರ ಜತೆಗೆ ಆಘಾತ ತಂದಿದೆ ಎಂದು ಬಣ್ಣಿಸಿದೆ. ಪಿಡಿಪಿ ನಾಯಕಿ ಮೆಹಬೂಬಾ ಮುಫ್ತಿ ಕೂಡಾ ದೇವಿಂದರ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.