ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತ ಬಿಜೆಪಿ ಸಂಸದ ಕಂಬಳ ಕಾರ್ಯಕ್ರಮದ ಅತಿಥಿ!
ಕುಸ್ತಿಪಟುಗಳನ್ನು ಪೀಡಿಸಿದ ಆರೋಪಿಯಿಂದಲೇ ಕುಸ್ತಿಪಟುಗಳಿಗೆ ಸನ್ಮಾನ ಏರ್ಪಡಿಸಿದ ಬೆಂಗಳೂರು ಕಂಬಳ ಸಮಿತಿ
ಬ್ರಿಜ್ ಭೂಷಣ್ ಶರಣ್ ಸಿಂಗ್ | Photo: PTI
ಬೆಂಗಳೂರು : ಇಲ್ಲಿನ ಅರಮನೆ ಮೈದಾನದಲ್ಲಿ ನ.25 ,26 ರಂದು ಎರಡು ದಿನ ನಡೆಯಲಿರುವ ಕಂಬಳ ಕಾರ್ಯಕ್ರಮಕ್ಕೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿರುವ ಆರೋಪ ಹೊತ್ತ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರನ್ನು ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂದು ತಿಳಿದು ಬಂದಿದೆ.
ಭಾರತದ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಅವರು ಕಂಬಳ ಕಾರ್ಯಕ್ರಮದಲ್ಲಿ ನ.25 ರಂದು ಕುಸ್ತಿಪಟುಗಳನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ನಟ ದರ್ಶನ್, ಮಾಜಿ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ, ರಾಷ್ಟ್ರೀಯ ಗ್ರಾಹಕರ ಸಹಕಾರ ಒಕ್ಕೂಟದ ಅಧ್ಯಕ್ಷ ವಿಶಾಲ್ ಸಿಂಗ್, ಸನ್ಮಾನ ಸಮಾರಂಭದಲ್ಲಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ಕಂಬಳ ಸಮಿತಿ ಆಯೋಜಿಸಿರುವ ಬೃಹತ್ ಕಂಬಳ ಕಾರ್ಯಕ್ರಮವು ನಾಲ್ಕು ಹಂತಗಳನ್ನು ಹೊಂದಿದ್ದು, ಎರಡು ದಿನಗಳಲ್ಲಿ ಅನೇಕ ಕಾರ್ಯಕ್ರಮಗಳು ನಡೆಯಲಿದೆ.
ಕಂಬಳ ಕಾರ್ಯಕ್ರಮವು ಮೊದಲ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ನ.25 ರಂದು ಬೆಳಿಗ್ಗೆ 10.30 ಕ್ಕೆ ನಡೆಯಲಿರುವ ಮುಖ್ಯ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಡಿವಿ ಸದಾನಂದ ಗೌಡ ಅವರನ್ನು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಎರಡು ದಿನಗಳ ಕಾರ್ಯಕ್ರಮದ ಅಧಿಕೃತ ಆಹ್ವಾನ ಪಟ್ಟಿಯಲ್ಲಿ ಹಲವಾರು ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರ ಹೆಸರುಗಳಿವೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಸ್ಪೀಕರ್ ಯು.ಟಿ.ಖಾದರ್, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಾಗವಹಿಸಲಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಕುಸ್ತಿಪಟುಗಳನ್ನು ಸನ್ಮಾನಿಸಲು ಬ್ರಿಜ್ ಭೂಷಣ್ ರನ್ನು ಆಹ್ವಾನಿಸಲಾಗಿದೆ.
ಪ್ರಕರಣವೇನು?
ಬ್ರಿಜ್ ಭೂಷಣ್ ವಿರುದ್ಧದ ಆರೋಪಗಳಲ್ಲಿ ಲೈಂಗಿಕ ಕಿರುಕುಳ ಮಾತ್ರವಲ್ಲದೆ ದೈಹಿಕ ಕಿರುಕುಳ, ಸರ್ವಾಧಿಕಾರಿ ಕಾರ್ಯನಿರ್ವಹಣೆ ಮತ್ತು ಫೆಡರೇಷನ್ ನಿರ್ವಹಣೆಯಲ್ಲಿನ ಆರ್ಥಿಕ ಅಕ್ರಮಗಳು ಸೇರಿವೆ . ಭಾರತದ ಅಗ್ರ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಈ ವರ್ಷದ ಆರಂಭದಲ್ಲಿ ದೆಹಲಿಯ ಜಂತರ್ ಮಂತರ್ನಲ್ಲಿ ಪ್ರತಿಭಟನೆ ನಡೆಸಿದ್ದರು. ಬ್ರಿಜ್ ಅವರನ್ನು WFI ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಬೇಕೆಂದು ಒತ್ತಾಯಿಸಿದ್ದರು.
ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಿಲ್ಲಿ ಪೊಲೀಸರು ನ್ಯಾಯಾಲಯಕ್ಕೆ ಈ ವರ್ಷ ಜೂ.13ಕ್ಕೆ ಸಲ್ಲಿಸಿರುವ ದೋಷಾರೋಪಣಾ ಪಟ್ಟಿಯಲ್ಲಿ ಆತ ಕುಸ್ತಿಪಟುಗಳಿಗೆ ಮತ್ತೆ ಮತ್ತೆ ಲೈಂಗಿಕ ಕಿರುಕುಳ ನೀಡಿದ್ದಾನೆ, ಬೆದರಿಕೆ ಹಾಕಿದ್ದಾನೆ ಹಾಗು ಹಿಂಬಾಲಿಸಿದ್ದಾನೆ. ಆತನನ್ನು ವಿಚಾರಣೆಗೆ ಕರೆಯಬೇಕು ಹಾಗು ಆತನ ಅಪರಾಧಗಳಿಗೆ ಶಿಕ್ಷೆಯಾಗಬೇಕು ಎಂದು ಹೇಳಿದ್ದಾರೆ. 15 ಮಂದಿ ಸಾಕ್ಷಿಗಳು ಬ್ರಿಜ್ ಭೂಷಣ್ ವಿರುದ್ಧ ಕುಸ್ತಿಪಟುಗಳು ಮಾಡಿರುವ ಲೈಂಗಿಕ ಕಿರುಕುಳದ ಆರೋಪಗಳನ್ನು ಪುಷ್ಟೀಕರಿಸಿದ್ದಾರೆ ಎಂದೂ ಪೊಲೀಸರು ಹೇಳಿದ್ದಾರೆ. ಬ್ರಿಜ್ ಭೂಷಣ್ ವಿರುದ್ಧ ಭಾರತೀಯ ದಂಡ ಸಂಹಿತೆಯ 506 (ಕ್ರಿಮಿನಲ್ ಬೆದರಿಕೆ ), 354 (ಮಹಿಳೆಯ ಜೊತೆ ಅಸಭ್ಯ ವರ್ತನೆ), 354 A (ಲೈಂಗಿಕ ಕಿರುಕುಳ ) ಹಾಗೂ 354 D (ಹಿಂಬಾಲಿಸುವ ) ಸೆಕ್ಷನ್ಗಳನ್ನು ಹಾಕಲಾಗಿದೆ. ಒಂದು ಪ್ರಕರಣದಲ್ಲಿ ಬ್ರಿಜ್ ಭೂಷಣ್ ಮತ್ತೆ ಮತ್ತೆ ನಿರಂತರ ಕಿರುಕುಳ ನೀಡಿದ್ದಾನೆ ಎಂದೂ ಪೊಲೀಸರು ಹೇಳಿದ್ದಾರೆ.
ಕಂಬಳ ಸಮಿತಿ ಏನು ಹೇಳುತ್ತದೆ?
ಬ್ರಿಜ್ ಭೂಷಣ್ ಮೇಲೆ ಆರೋಪಗಳು ಮುನ್ನೆಲೆಗೆ ಬಂದಾಗ ಅವರನ್ನು WFI ಅಧ್ಯಕ್ಷ ಸ್ಥಾನದಿಂದ ವಜಾ ಮಾಡಬೇಕು ಎಂದು ಕಾಂಗ್ರೆಸ್ ಪಕ್ಷ ಆಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರು ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ, ಕಾಂಗ್ರೆಸ್ ನ ಅಶೋಕ್ ರೈ ಅವರನ್ನು ವಾರ್ತಾಭಾರತಿ ಸಂಪರ್ಕಿಸಿತು. ಈ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್ ರೈ, “ಬ್ರಿಜ್ ಭೂಷಣ್ ರನ್ನು ಆಹ್ವಾನಿಸುವ ತೀರ್ಮಾನ ಕಂಬಳ ಸಮಿತಿಯದ್ದಲ್ಲ. ವೈಯುಕ್ತಿಕವಾಗಿ ನನ್ನದೂ ಅಲ್ಲ. ಕಂಬಳದಲ್ಲಿ, ಗೋವಾದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರಶಸ್ತಿ ವಿಜೇತ ಕರ್ನಾಟಕದ ಕುಸ್ತಿಪಟುಗಳನ್ನು ಅಭಿನಂದಿಸುವ ಯೋಜನೆ ಹಾಕಿಕೊಂಡಿದ್ದೇವೆ. ಅವರಲ್ಲಿ ಸಿದ್ಧಿ ಜನಾಂಗದ ಕುಸ್ತಿ ಪಟುಗಳಿದ್ದಾರೆ. ಅವರು, ನಮ್ಮನ್ನು ಸನ್ಮಾನಿಸಲು ಬ್ರಿಜ್ ಭೂಷಣ್ ಬಂದರೆ ಉತ್ತಮ ಎನ್ನುವ ಬೇಡಿಕೆ ಇಟ್ಟಿದ್ದರು. ಆ ಕಾರಣಕ್ಕಾಗಿ ನಾವು ಬ್ರಿಜ್ ಅವರನ್ನು ಆಹ್ವಾನಿಸಿದ್ದೇವೆ. ಅವರು ಆಹ್ವಾನ ಸ್ವೀಕರಿಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರು ಕಾರ್ಯಕ್ರಮದಲ್ಲಿ ಭಾಗವಹಿಸುವ ಬಗ್ಗೆ ಅಧಿಕೃತ ಮಾಹಿತಿ ಇಲ್ಲ” ಎಂದು ಹೇಳಿದ್ದಾರೆ.