ಸಂಸತ್ ಆವರಣದಲ್ಲಿ ಪರಸ್ಪರ ತಳ್ಳಾಡಿದ ಬಿಜೆಪಿ-ಪ್ರತಿಪಕ್ಷ ಸಂಸದರು
ರಾಹುಲ್ ವಯಸ್ಸಾದ ಸಂಸದರನ್ನು ದೂಡಿದ್ದರು: ಬಿಜೆಪಿ ಆರೋಪ
ರಾಹುಲ್ ಗಾಂಧಿ | PTI
ಹೊಸದಿಲ್ಲಿ: ಬಿ.ಆರ್.ಅಂಬೇಡ್ಕರ್ ಅವರನ್ನು ಅವಮಾನಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ಸಂಸತ್ತಿನ ಆವರಣದಲ್ಲಿ ಪ್ರತಿಪಕ್ಷ ಮತ್ತು ಎನ್ಡಿಎ ಸಂಸದರು ಪರಸ್ಪರ ತಳ್ಳಾಡಿದ್ದು,ಬಿಜೆಪಿ ಸಂಸದ ಹಾಗೂ ಮಾಜಿ ಸಚಿವ ಪ್ರತಾಪಚಂದ್ರ ಸಾರಂಗಿ ಗಾಯಗೊಂಡಿದ್ದಾರೆ.
ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಸಾರಂಗಿಯವರನ್ನು ತಳ್ಳಿದ್ದರು ಎಂದು ಬಿಜೆಪಿ ಆರೋಪಿಸಿದೆ, ಆದರೆ ರಾಹುಲ್ ಇದನ್ನು ತಿರಸ್ಕರಿಸಿದ್ದಾರೆ.
ಪ್ರತಿಪಕ್ಷಗಳ ಮೈತ್ರಿಕೂಟ ಇಂಡಿಯಾದ ಸಂಸದರು ಮಕರದ್ವಾರದ ಮೆಟ್ಟಿಲುಗಳ ಒಂದು ಪಾರ್ಶ್ವದಲ್ಲಿ ಖಾಲಿಯಿದ್ದ ಸ್ಥಳದ ಬದಲು ಪ್ರತಿಭಟನೆಯನ್ನು ನಡೆಸುತ್ತಿದ್ದ ಬಿಜೆಪಿ ಸಂಸದರ ಮಧ್ಯದಿಂದಲೇ ಸಂಸತ್ ಪ್ರವೇಶಿಸಲು ಪಟ್ಟು ಹಿಡಿದಿದ್ದು ತೊಂದರೆಗೆ ಕಾರಣವಾಗಿತ್ತು.
ಬಿಜೆಪಿ ಸಂಸದ ಮುಕೇಶ ರಾಜಪೂತ ಕೂಡ ಈ ಗಲಾಟೆಯಲ್ಲಿ ಗಾಯಗೊಂಡಿದ್ದಾರೆ ಎಂದು ಕಾನೂನು ಸಚಿವ ಅರ್ಜುನ ರಾಮ ಮೇಘ್ವಾಲ್ ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ ಸಂಕೀರ್ಣದಲ್ಲಿ ಸಾರಂಗಿ ಮತ್ತು ರಾಜಪೂತ ಅವರಿಗೆ ಕರೆಗಳನ್ನು ಮಾಡಿ ಆರೋಗ್ಯದ ಬಗ್ಗೆ ವಿಚಾರಿಸಿದರು ಎಂದು ಮೂಲಗಳು ತಿಳಿಸಿದವು. ಸಾರಂಗಿಯವರ ಹಣೆಯ ಎಡಭಾಗದಲ್ಲಿ ಗಾಯವಾಗಿದೆ.
ರಾಹುಲ್ ಸಾರಂಗಿಯವರನ್ನು ತಳ್ಳಿದ್ದರೆಂದು ಆರೋಪಿಸಿದ ಬಿಜೆಪಿ ಸಂಸದ ನಿಶಿಕಾಂತ ದುಬೆ, ‘ನಿಮಗೆ ನಾಚಿಕೆಯಾಗುವುದಿಲ್ಲವೇ ರಾಹುಲ್? ನೀವು ಗೂಂಡಾಗಿರಿಗೆ ಇಳಿದಿದ್ದೀರಿ. ನೀವು ವಯಸ್ಸಾದ ವ್ಯಕ್ತಿಯನ್ನು ತಳ್ಳಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ರಾಹುಲ್ ‘ಅವರೇ ನನ್ನನ್ನು ತಳ್ಳಿದ್ದರು’ ಎಂದು ಹೇಳಿದರು.
‘ರಾಹುಲ್ ಸಂಸದರೋರ್ವರನ್ನು ತಳ್ಳಿದ್ದರು ಮತ್ತು ಅವರು ನನ್ನ ಮೇಲೆ ಬಿದ್ದಿದ್ದರು,ನಾನು ಗಾಯಗೊಂಡೆ’ ಎಂದು ಸಾರಂಗಿ ಸುದ್ದಿಗಾರರಿಗೆ ತಿಳಿಸಿದರು.
ಸಾರಂಗಿಯವರನ್ನು ಚಿಕಿತ್ಸೆಗಾಗಿ ರಾಮ ಮನೋಹರ ಲೋಹಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಜೆಪಿ ಸದಸ್ಯರು ಮಕರದ್ವಾರದಲ್ಲಿ ಕುಳಿತುಕೊಂಡು ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಲು ಆರಂಭಿಸಿದ್ದರು.
ಕೇಂದ್ರ ಸಚಿವರಾದ ಶಿವರಾಜ ಸಿಂಗ್ ಚೌಹಾಣ್ ಮತ್ತು ಪ್ರಹ್ಲಾದ್ ಜೋಶಿ ಅವರು ಆಸ್ಪತ್ರೆಯಲ್ಲಿ ಸಾರಂಗಿಯವರನ್ನು ಭೇಟಿಯಾಗಿ ಅವರ ಸ್ಥಿತಿಯನ್ನು ವಿಚಾರಿಸಿಕೊಂಡರು. ರಕ್ತಸ್ರಾವವನ್ನು ತಡೆಯಲು ಸಾರಂಗಿಯವರ ಹಣೆಗೆ ಹೊಲಿಗೆಗಳನ್ನು ಹಾಕಲಾಗಿದೆ ಎಂದು ಚೌಹಾಣ್ ಸುದ್ದಿಗಾರರಿಗೆ ತಿಳಿಸಿದರು.
ಸಾರಂಗಿಯವರಿಗೆ ಆಗಿರುವ ಗಾಯಗಳ ಪರಿಶೀಲನೆಯ ಬಳಿಕ ಸೂಕ್ತ ಕ್ರಮವನ್ನು ತೆಗೆದುಕೊಳ್ಳಲಾಗುವುದು, ಸಂಸತ್ತು ದೈಹಿಕ ಶಕ್ತಿಯನ್ನು ತೋರಿಸುವ ಸ್ಥಳವಲ್ಲ, ಅದು ಕುಸ್ತಿಕಣವಲ್ಲ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ ರಿಜಿಜು ಹೇಳಿದರು.
ಕಾಂಗ್ರೆಸ್ ಸಂಸದರು ಲೋಕಸಭಾ ಸ್ಪೀಕರ್ ಓಂ ಬಿರ್ಲಾರನ್ನು ಭೇಟಿಯಾಗಿ ರಾಹುಲ್ ವಿರುದ್ಧ ಬಿಜೆಪಿ ಸಂಸದರ ಅಶಿಸ್ತಿನ ವರ್ತನೆ ಕುರಿತು ದೂರು ಸಲ್ಲಿಸಿದ್ದಾರೆ.
ಅಮಿತ್ ಶಾ ಹೇಳಿಕೆ ವಿರುದ್ಧ ಪ್ರತಿಭಟನೆ:
ಅಂಬೇಡ್ಕರ್ ಕುರಿತು ತನ್ನ ಹೇಳಿಕೆಗಳಿಗಾಗಿ ಗೃಹಸಚಿವ ಅಮಿತ್ ಶಾ ಕ್ಷಮಾಯಾಚನೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರ ತೀವ್ರ ಪ್ರತಿಭಟನೆಗಳಿಂದಾಗಿ ಗುರುವಾರ ಸಂಸತ್ತಿನ ಉಭಯ ಸದನಗಳನ್ನು ಮುಂದೂಡಲಾಯಿತು.
ಇದಕ್ಕೂ ಮುನ್ನ ಅಂಬೇಡ್ಕರ್ ಜೊತೆಗೆ ಗುರುತಿಸಿಕೊಂಡಿರುವ ನೀಲಿ ಬಣ್ಣದ ಉಡುಪು ಧರಿಸಿದ್ದ ಖರ್ಗೆ,ರಾಹುಲ್,ಪ್ರಿಯಾಂಕಾ ಗಾಂಧಿ ವಾದ್ರಾ,ಕೆ.ಕನಿಮೋಳಿ ಸೇರಿದಂತೆ ಪ್ರತಿಪಕ್ಷಗಳ ಸಂಸದರು ಶಾ ರಾಜೀನಾಮೆಗೆ ಆಗ್ರಹಿಸಿ ಸಂಸತ್ತಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಬಿಜೆಪಿ ಸಂಸದರೂ ಸಂಸತ್ತಿನ ಆವರಣದಲ್ಲಿ ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಕ್ಕಾಗಿ ಪ್ರತಿಪಕ್ಷ ಕಾಂಗ್ರೆಸ್ನಿಂದ ಕ್ಷಮಾಯಾಚನೆಗೆ ಆಗ್ರಹಿಸಿ ಭಿತ್ತಿಪತ್ರಗಳೊಂದಿಗೆ ಘೋಷಣೆಗಳನ್ನು ಕೂಗುತ್ತ ಪ್ರತಿಭಟನೆ ನಡೆಸಿದರು.
ಸಂಸತ್ತಿನ ಮಕರದ್ವಾರದ ಎದುರು ಎನ್ಡಿಎ ಮತ್ತು ಇಂಡಿಯಾ ಸದಸ್ಯರು ಮುಖಾಮುಖಿಯಾದಾಗ ಉಭಯ ಕಡೆಗಳವರು ಪರಸ್ಪರರನ್ನು ಮೀರಿಸಲು ಜೋರಾಗಿ ಘೋಷಣೆಗಳನ್ನು ಕೂಗತೊಡಗಿದ್ದರು.
ಇದಕ್ಕೂ ಮುನ್ನ ಇಂಡಿಯಾ ಸಂಸದರು ಮೈ ಭೀ ಅಂಬೇಡ್ಕರ್,ಜೈ ಭೀಮ್ ಮತ್ತು ಅಮಿತ್ ಶಾ ಮಾಫಿ ಮಾಂಗೋ ಎಂಬ ಪೋಸ್ಟರ್ಗಳೊಂದಿಗೆ ಸಂಸತ್ ಆವರಣದಲ್ಲಿಯ ಅಂಬೇಡ್ಕರ್ ಪ್ರತಿಮೆಯ ಬಳಿ ಪ್ರತಿಭಟನೆ ನಡೆಸಿದರು. ಕಾಂಗ್ರೆಸ್,ಡಿಎಂಕೆ,ಆರ್ಜೆಡಿ,ಎಸ್ಪಿ,ಎಡರಂಗ,ಎನ್ಸಿಪಿ(ಎಸ್ಪಿ) ಮತ್ತು ಇತರ ಇಂಡಿಯಾ ಪಕ್ಷಗಳ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಸ್ಪೀಕರ್ಗೆ ಕಾಂಗ್ರೆಸ್ ಸಂಸದರ ದೂರು:
ಕಾಂಗ್ರೆಸ್ ಸಂಸದರಾದ ಕೆ.ಸಿ.ವೇಣುಗೋಪಾಲ,ಕೆ.ಸುರೇಶ,ರವೀಂದ್ರ ಚವಾಣ,ಡೀನ್ ಕುರಿಯಾಕೋಸ್ ಮತ್ತು ವಿ.ಕೆ.ಶ್ರೀಕಂದನ್ ಅವರು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಪತ್ರವನ್ನು ಬರೆದು,ಬಿಜೆಪಿ ಸಂಸದರು ರಾಹುಲ್ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಸೂಕ್ತಕ್ರಮವನ್ನು ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.