ಹಿಂಸೆಯ ಬೆಂಕಿಗೆ ತುಪ್ಪ ಸುರಿಯುವ ಬಿಜೆಪಿ ; ಸಿಡಬ್ಲ್ಯುಸಿ ಸಭೆಯಲ್ಲಿ ಖರ್ಗೆ ವಾಗ್ದಾಳಿ
ಮಲ್ಲಿಕಾರ್ಜುನ ಖರ್ಗೆ | Photo: PTI
ಹೈದರಾಬಾದ್: ಭಾರತವು ಗಂಭೀರವಾದ ಆಂತರಿಕ ಸವಾಲುಗಳನ್ನು ಎದುರಿಸುತ್ತಿದ್ದು, ಇತ್ತೀಚಿನ ಹಿಂಸಾತ್ಮಕ ಘಟನೆಗಳು ಭಾರತದ ಪ್ರಗತಿಪರ ಹಾಗೂ ಜಾತ್ಯತೀತ ವರ್ಚಸ್ಸಿಗೆ ಕಳಂಕ ಹಚ್ಚಿವೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶನಿವಾರ ಆತಂಕ ವ್ಯಕ್ತಪಡಿಸಿದ್ದಾರೆ. ಕೇಂದ್ರದ ಆಡಳಿತಾರೂಢ ಬಿಜೆಪಿಯು ಹಿಂಸಾಚಾರದ ಬೆಂಕಿಗೆ ತುಪ್ಪ ಸುರಿಯುತ್ತಿದೆ ಎಂದವರು ಆಪಾದಿಸಿದ್ದಾರೆ.
ಹೈದರಾಬಾದ್ ನಲ್ಲಿ ಶನಿವಾರ ಆರಂಭಗೊಂಡ ಪುನರ್ರಚಿತ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಪ್ರಥಮ ಸಭೆಯ ಉದ್ಘಾಟನಾ ಭಾಷಣ ಮಾಡಿದ ಖರ್ಗೆ, ಸಮಾಜದ ಎಲ್ಲಾ ಅವಕಾಶ ವಂಚಿತ ವರ್ಗಗಳಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಹಾಗೂ ಆಹಾರಭದ್ರತೆಯ ಹಕ್ಕನ್ನು ಒದಗಿಸಲು ಜನಗಣತಿಯ ಜೊತೆಗೆ ಜಾತಿಗಣತಿಯನ್ನು ಕೂಡಾ ನಡೆಸಬೇಕೆಂದು ಆಗ್ರಹಿಸಿದರು.
ಇಂಡಿಯಾ ಮೈತ್ರಿಕೂಟದ ಎಲ್ಲಾ 27 ಪಕ್ಷಗಳು ಪ್ರಮುಖ ಮೂಲಭೂತ ವಿಷಯಗಳ ಬಗ್ಗೆ ಜೊತೆಯಾಗಿ ನಿಲ್ಲಲಿವೆ. ಮೂರು ಯಶಸ್ವಿ ಸಭೆಗಳ ಬಳಿಕ ಜನವಿರೋಧಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಸರಕಾರವನ್ನು ಎದುರಿಸಲು ವಿಪಕ್ಷ ಮೈತ್ರಿಕೂಟವು ರೂಪುಗೊಂಡಿದೆ. ಈ ಬೆಳವಣಿಗೆಯಿಂದ ವಿಚಲಿತವಾಗಿರುವ ಬಿಜೆಪಿ ಸರಕಾರವು ಪ್ರತಿಪಕ್ಷಗಳ ವಿರುದ್ಧ ಸೇಡಿನ ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ಆರೋಪಿಸಿದರು.
ಸಂಸತ್ತಿನಲ್ಲಿ ಪ್ರತಿಪಕ್ಷಗಳನ್ನು ಹಾಗೂ ಸಾರ್ವಜನಿಕ ಪರಿಶೀಲನೆಯನ್ನು ಹತ್ತಿಕ್ಕುವ ಸರಕಾರದ ಪ್ರಯತ್ನಗಳನ್ನು ಕಾಂಗ್ರೆಸ್ ಬಲವಾಗಿ ಖಂಡಿಸುತ್ತದೆ ಎಂದು ಹೇಳಿದ ಖರ್ಗೆ, ಸಂಸತ್ತಿನ ವಿಶೇಷ ಅಧಿವೇಶನವು ಆಡಳಿತರೂಢ ಪಕ್ಷದ ಉದ್ದೇಶಗಳ ಬಗ್ಗೆ ಆತಂಕಗಳನ್ನು ಹುಟ್ಟುಹಾಕಿದೆ ಎಂದರು.
ಭಾರತವು ಇಂದು ಕವಲುದಾರಿಯಲ್ಲಿದ್ದು, ಅದು ಹಲವಾರು ಗಂಭೀರ ಆಂತರಿಕ ಸವಾಲುಗಳನ್ನು ಎದುರಿಸುತ್ತಿದೆ. ಹಣದುಬ್ಬರ, ನಿರುದ್ಯೋಗ, ಮಣಿಪುರದಲ್ಲಿ ಹಿಂಸಾಚಾರದ ತಾಂಡವ, ಹೆಚ್ಚುತ್ತಿರುವ ಅಸಮಾನತೆ ಹಾಗೂ ಶೋಚನೀಯವಾಗುತ್ತಿರುವ ರೈತರು ಹಾಗೂ ಕಾರ್ಮಿಕರ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಮೋದಿ ಸರಕಾರವು ಸಂಪೂರ್ಣ ವಿಫಲವಾಗಿದೆ ಎಂದರು.
ಮಣಿಪುರದಲ್ಲಿ ಅನಾವರಣಗೊಂಡ ದುರಂತಮಯ ಘಟನೆಗಳಿಗೆ ಇಡೀ ದೇಶವೇ ಸಾಕ್ಷಿಯಾಗಿದೆ. ಮಣಿಪುರದ ಬೆಂಕಿಯು ಹರ್ಯಾಣದ ನೂಹ್ ಜಿಲ್ಲೆಯನ್ನು ತಲುಪುವುದಕ್ಕೆ ಮೋದಿ ಸರಕಾರವು ಆಸ್ಪದ ಮಾಡಿಕೊಟ್ಟಿದೆ. ಈ ಘಟನೆಗಳು ಆಧುನಿಕ, ಪ್ರಗತಿಪರ ಹಾಗೂ ಜಾತ್ಯತೀತ ಭಾರತದ ವರ್ಚಸ್ಸಿಗೆ ಕಳಂಕ ತಂದಿವೆ. ಕೇಂದ್ರದ ಆಡಳಿತ ಪಕ್ಷ, ಕೋಮುವಾದಿ ಸಂಘಟನೆಗಳು ಹಾಗೂ ಮಾಧ್ಯಮದ ಒಂದು ವರ್ಗವು, ಹಿಂಸಾಚಾರದ ಬೆಂಕಿಗೆ ತುಪ್ಪ ಸುರಿಯುತ್ತಿವೆ ಎಂದವರು ಆಪಾದಿಸಿದರು.
ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ ಮಾತನಾಡಿ, ಕಾಂಗ್ರೆಸ್ ಪಕ್ಷವು ಇಂಡಿಯಾ ಮೈತ್ರಿಕೂಟದ ಜೊತೆಗೂಡಿ, ಬಿಜೆಪಿ ವಿರುದ್ಧ ಹೋರಾಡಬೇಕೆಂದು ಕರೆ ನೀಡಿದರು.
ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾಗಾಂಧಿ, ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಮತ್ತಿತರ ಹಿರಿಯ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ತೆಲಂಗಾಣ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಸನ್ನಿಹಿತವಾಗುತ್ತಿರುವಂತೆಯೇ, ಸಿಡಬ್ಲುಸಿ ಸಭೆಯಲ್ಲಿ ಚುನಾವಣಾ ಕಾರ್ಯತಂತ್ರ ಹಾಗೂ ಇಂಡಿಯಾ ಮೈತ್ರಿಕೂಟದ ಸೀಟು ಹಂಚಿಕೆ ಕುರಿತ ಮಾತುಕತೆಗಳು ನಡೆಯುವ ಸಾಧ್ಯತೆ ಇದೆಯೆನ್ನಲಾಗಿದೆ.