2022-23ರಲ್ಲಿ ರಾಜಕೀಯ ಪಕ್ಷಗಳ ಒಟ್ಟು ಆದಾಯದಲ್ಲಿ ಬಿಜೆಪಿಯದ್ದೊಂದೇ 76% : ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್
ಸಾಂದರ್ಭಿಕ ಚಿತ್ರ | Photo: PTI
ಹೊಸದಿಲ್ಲಿ: 2022-23ನೇ ಹಣಕಾಸು ವರ್ಷದಲ್ಲಿ ಎಲ್ಲಾ ಆರು ರಾಷ್ಟ್ರೀಯ ರಾಜಕೀಯ ಪಕ್ಷಗಳು ಒಟ್ಟು ಸುಮಾರು 3,077 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿವೆ. ಈ ಪೈಕಿ 76.73 ಶೇಕಡದಷ್ಟನ್ನು ಬಿಜೆಪಿಯೊಂದೇ ಸ್ವೀಕರಿಸಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಎಫ್ಡಿಆರ್)ನ ವಿಶ್ಲೇಷಣೆಯೊಂದು ಬುಧವಾರ ಹೇಳಿದೆ.
ಆರು ರಾಜಕೀಯ ಪಕ್ಷಗಳ ಒಟ್ಟು ಆದಾಯ 3,077 ಕೋಟಿ ರೂಪಾಯಿ ಪೈಕಿ ಬಿಜೆಪಿಯೊಂದೇ 2,361 ಕೋಟಿ ರೂಪಾಯಿ ಸ್ವೀಕರಿಸಿದೆ.
ಈ ಅವಧಿಯಲ್ಲಿ ತನ್ನ ಆದಾಯ 452.37 ಕೋಟಿ ರೂಪಾಯಿ ಎಂಬುದಾಗಿ ಕಾಂಗ್ರೆಸ್ ಘೋಷಿಸಿದೆ. ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)ದ ಆದಾಯ 141.66 ಕೋಟಿ ರೂ. ಆಗಿದೆ. ಈ ಅವಧಿಯಲ್ಲಿ ಆಮ್ ಆದ್ಮಿ ಪಕ್ಷವು 85.17 ಕೋಟಿ ರೂ. ಗಳಿಸಿದರೆ, ಬಹುಜನ ಸಮಾಜ ಪಕ್ಷವು 29.27 ಕೋಟಿ ರೂ. ಸಂಪಾದಿಸಿದೆ. ಅದೇ ವೇಳೆ, ನ್ಯಾಶನಲ್ ಪೀಪಲ್ಸ್ ಪಾರ್ಟಿ 7.56 ಕೋಟಿ ರೂ. ಸಂಪಾದಿಸಿದೆ.
ಬಿಜೆಪಿಯ ಆದಾಯದ ಪೈಕಿ 1,294.14 ಕೋಟಿ ರೂಪಾಯಿ ಅಂದರೆ 54.82 ಶೇಕಡ ಚುನಾವಣಾ ಬಾಂಡ್ ಗಳಿಂದ ಬಂದಿದೆ ಎಂದು ಎಎಫ್ಡಿಆರ್ ಹೇಳಿದೆ.
ಚುನಾವಣಾ ಬಾಂಡ್ ಯೋಜನೆಯನ್ನು ಸುಪ್ರೀಂ ಕೋರ್ಟ್ ಫೆಬ್ರವರಿ 15ರಂದು ರದ್ದುಗೊಳಿಸಿದೆ. ಅದು ಅಸಾಂವಿಧಾನಿಕವಾಗಿದ್ದು, ದೇಣಿಗೆದಾರರು ಮತ್ತು ರಾಜಕೀಯ ಪಕ್ಷಗಳ ನಡುವೆ ಕೊಡುಕೊಳ್ಳುವ ವ್ಯವಹಾರಗಳಿಗೆ ಕಾರಣವಾಗಬಹುದು ಎಂದು ಅದು ಅಭಿಪ್ರಾಯಪಟ್ಟಿದೆ.
2022-23ನೇ ಹಣಕಾಸು ವರ್ಷದಲ್ಲಿ ಕಾಂಗ್ರೆಸ್ ಚುನಾವಣಾ ಬಾಂಡ್ ಗಳ ಮೂಲಕ 171.02 ಕೋಟಿ ರೂ. ಪಡೆದಿದೆ. ಆಮ್ ಆದ್ಮಿ ಪಕ್ಷವು 45.45 ಕೋಟಿ ರೂ. ಪಡೆದಿದೆ.