ರಾಹುಲ್ ಗಾಂಧಿಯನ್ನು ಆಧುನಿಕ 'ರಾವಣ' ಪೋಸ್ಟರ್ನೊಂದಿಗೆ ಟ್ವೀಟ್ ಮಾಡಿದ ಬಿಜೆಪಿ!
ರಾಹುಲ್ ಗಾಂಧಿ | Photo: PTI
ಹೊಸದಿಲ್ಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬಿಜೆಪಿಯು, ‘ದುಷ್ಟ, ಧರ್ಮ ವಿರೋಧಿ ಮತ್ತು ರಾಮ ವಿರೋಧಿ’ ಎಂದು, ‘ರಾವಣ’ನಂತೆ ಚಿತ್ರಿಸಿರುವ ಫೊಟೋವನ್ನು ಸಾಮಾಜಿಕ ಜಾಲತಾಣ ʼxʼ ನಲ್ಲಿ ಗುರುವಾರ ಬಿಡುಗಡೆ ಮಾಡಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಪಕ್ಷ ‘ಇದು ಕ್ರೂರವಾದ ಗ್ರಾಫಿಕ್ ಆಗಿದ್ದು, ಕಾಂಗ್ರೆಸ್ನ ಮಾಜಿ ಅಧ್ಯಕ್ಷರ ಮೇಲೆ ಹಿಂಸಾಚಾರವನ್ನು ಪ್ರಚೋದಿಸುವ ಉದ್ದೇಶ ಹೊಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದೆ.
‘ಆಧುನಿಕ ರಾವಣ ಇಲ್ಲಿದ್ದಾನೆ. ಈತ ದುಷ್ಟ, ಧರ್ಮ ವಿರೋಧಿ. ರಾಮನ ವಿರೋಧಿ. ಈತನ ಗುರಿ ಭಾರತವನ್ನು ನಾಶ ಮಾಡುವುದಾಗಿದೆ’ ಎಂದು ಬಿಜೆಪಿ ತನ್ನ ಪೋಸ್ಟ್ನಲ್ಲಿ ಹೇಳಿದೆ. ಬಿಜೆಪಿಯ ಪೋಸ್ಟ್ ಖಂಡಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, ‘ಈ ಪೋಸ್ಟ್ ಮಾಡಿದ ಬಿಜೆಪಿಗೆ ನಾಚಿಕೆಯಾಗಬೇಕು. ಇದನ್ನು ಖಂಡಿಸಲು ಪದಗಳಿಲ್ಲ. ಬಿಜೆಪಿಯವರು ರಾಹುಲ್ ಅವರನ್ನು ಕೊಲ್ಲಲು ಬಯಸಿದ್ದಾರೆ.
ರಾಹುಲ್ ಅವರ ʼಸುರಕ್ಷಿತ ನಿವಾಸ’ದಿಂದ ಹೊರಹಾಕಿದ ಬಳಿಕ, ಸರ್ಕಾರ ಅವರಿಗೆ ಮತ್ತೊಂದು ಮನೆ ಮಂಜೂರು ಮಾಡಿಲ್ಲ. ತಮ್ಮನ್ನು ವಿರೋಧಿಸುವ ಉಗ್ರ ಟೀಕಾಕಾರರನ್ನು ತೊಡೆದು ಹಾಕಲು ಬಿಜೆಪಿ ಪಿತೂರಿ ನಡೆಸುತ್ತಿದೆ ಎಂಬುದನ್ನು ಇದು ಸೂಚಿಸುತ್ತದೆ’ ಎಂದೂ ವೇಣುಗೋಪಾಲ್ ಆರೋಪಿಸಿದ್ದಾರೆ. ‘ಈ ಪೋಸ್ಟರ್ ನ ನಿಜವಾದ ಉದ್ದೇಶವೇನು?’ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, ‘ಕಾಂಗ್ರೆಸ್ ಮಾಜಿ ಅಧ್ಯಕ್ಷರ ವಿರುದ್ಧ ಹಿಂಸಾಚಾರವನ್ನು ಪ್ರಚೋದಿಸಲು ಇದನ್ನು ಸೃಷ್ಟಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.