ಲೋಕಸಭಾ ಚುನಾವಣೆ: ಬಿಜೆಪಿ ಪಟ್ಟಿಯಿಂದ ಹೊರಗುಳಿದಿದ್ದ ಹಾಲಿ ಸಂಸದ ಹರ್ಷವರ್ಧನ್ ರಾಜಕೀಯಕ್ಕೆ ವಿದಾಯ
ಹರ್ಷವರ್ಧನ್ (PTI)
ಹೊಸದಿಲ್ಲಿ: ಮಾಜಿ ಕೇಂದ್ರ ಆರೋಗ್ಯ ಸಚಿವ ಹಾಗೂ ದಿಲ್ಲಿಯ ಚಾಂದನಿ ಚೌಕ್ ಕ್ಷೇತ್ರದ ಹಾಲಿ ಬಿಜೆಪಿ ಸಂಸದ ಹರ್ಷವರ್ಧನ್ ಅವರು ರಾಜಕೀಯವನ್ನು ತೊರೆಯುವ ತನ್ನ ನಿರ್ಧಾರವನ್ನು ರವಿವಾರ ಪ್ರಕಟಿಸಿದ್ದಾರೆ.
ಬಿಜೆಪಿ ಶನಿವಾರ ಲೋಕಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದು, ಚಾಂದನಿ ಚೌಕ್ ಕ್ಷೇತ್ರದಿಂದ ಹರ್ಷವರ್ಧನ ಅವರನ್ನು ಕೈಬಿಟ್ಟು ಪ್ರವೀಣ ಖಂಡೇಲವಾಲ್ರನ್ನು ಹೆಸರಿಸಿದೆ.
ತನ್ನ ನಿರ್ಧಾರವನ್ನು ಎಕ್ಸ್ ಪೋಸ್ಟ್ನಲ್ಲಿ ಪ್ರಕಟಿಸಿರುವ 69ರ ಹರೆಯದ ಹರ್ಷವರ್ಧನ್, "ನನ್ನ 30 ವರ್ಷಗಳಿಗೂ ಹೆಚ್ಚಿನ ವೈಭವಯುತ ಚುನಾವಣಾ ವೃತ್ತಿಜೀವನದಲ್ಲಿ ನಾನು ಎಲ್ಲ ಐದೂ ವಿಧಾನಸಭಾ ಚುನಾವಣೆಗಳನ್ನು ಗೆದ್ದಿದ್ದೇನೆ. ಎರಡು ಲೋಕಸಭಾ ಚುನಾವಣೆಗಳನ್ನೂ ಭಾರೀ ಅಂತರದಿಂದ ಗೆದ್ದಿದ್ದೇನೆ. ಪಕ್ಷದ ಸಂಘಟನೆ ಹಾಗೂ ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲಿ ಅನೇಕ ಪ್ರತಿಷ್ಠಿತ ಹುದ್ದೆಗಳನ್ನು ಹೊಂದಿದ್ದೇನೆ. ಇದೀಗ ಅಂತಿಮವಾಗಿ ನನ್ನ ಬೇರುಗಳಿಗೆ ಮರಳುತ್ತಿದ್ದೇನೆ" ಎಂದು ಬರೆದಿದ್ದಾರೆ.
ತಾನು ವೈದ್ಯಕೀಯ ವೃತ್ತಿಗೆ ಮರಳುವುದಾಗಿ ತಿಳಿಸಿರುವ ಅವರು, "ನಾನು ಮುಂದೆ ಸಾಗುತ್ತೇನೆ. ನನಗೆ ನಿಜಕ್ಕೂ ಕಾಯಲು ಸಾಧ್ಯವಿಲ್ಲ. ನಾನು ಭರವಸೆಗಳನ್ನು ಕಾಯ್ದುಕೊಳ್ಳಬೇಕಿದೆ ಮತ್ತು ನಿದ್ರೆಗೆ ಮುನ್ನ ಮೈಲುಗಳಷ್ಟು ಸಾಗಬೇಕಿದೆ. ನಾನು ಕನಸನ್ನು ಹೊಂದಿದ್ದೇನೆ ಮತ್ತು ನಿಮ್ಮ ಆಶೀರ್ವಾದಗಳು ಸದಾ ನನ್ನ ಜೊತೆಯಲ್ಲಿರುತ್ತವೆ ಎನ್ನುವುದು ನನಗೆ ತಿಳಿದಿದೆ. ಕೃಷ್ಣನಗರದಲ್ಲಿಯ ನನ್ನ ಇಎನ್ಟಿ ಕ್ಲಿನಿಕ್ ಕೂಡ ನನ್ನ ಮರಳುವಿಕೆಗಾಗಿ ಕಾಯುತ್ತಿದೆ" ಎಂದು ಟ್ವೀಟಿಸಿದ್ದಾರೆ.