ನವಾಬ್ ಮಲಿಕ್ ಉಮೇದುವಾರಿಕೆಗೆ ಬಿಜೆಪಿ ವಿರೋಧ: ಮಹಾಯುತಿಯಲ್ಲಿ ಒಡಕು
ನವಾಬ್ ಮಲಿಕ್ PC: PTI
ಮುಂಬೈ: ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ನಡೆಯುವ ಚುನಾವಣೆಗೆ ಕೆಲವೇ ದಿನ ಮೊದಲು ಆಡಳಿತಾರೂಢ ಮಹಾಯುತಿ ಮೈತ್ರಿಕೂಟದಲ್ಲಿ ಒಡಕು ಕಾಣಿಸಿಕೊಂಡಿದೆ. ಮನ್ಖುರ್ದ್ ಶಿವಾಜಿನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ ಮತ್ತು ಬಿಜೆಪಿ ನಡುವಿನ ವೈಮನಸ್ಯ ಇದೀಗ ಬಹಿರಂಗವಾಗಿದೆ. ಎನ್ ಸಿಪಿ ಈ ಕ್ಷೇತ್ರಕ್ಕೆ ನವಾಬ್ ಮಲಿಕ್ ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಇದೇ ಕ್ಷೇತ್ರದಿಂದ ಶಿವಸೇನೆಯ ಸುರೇಶ್ ಕೃಷ್ಣ ಪಾಟೀಲ್ ಅವರನ್ನು ಆಧಿಕೃತ ಅಭ್ಯರ್ಥಿಯಾಗಿ ಬಿಜೆಪಿ ಘೋಷಿಸಿದೆ.
"ಮನ್ಖುರ್ದ್ ಶಿವಾಜಿನಗರ ಕ್ಷೇತ್ರದಿಂದ ಮಹಾಯುತಿ ಅಧಿಕೃತ ಅಭ್ಯರ್ಥಿ ಬುಲೆಟ್ ಪಟೇಲ್ ಅಧಿಕೃತ ಅಭ್ಯರ್ಥಿ. ಮತ ಜಿಹಾದ್ ಮತ್ತು ಭಯೋತ್ಪಾದನೆಯನ್ನು ಬೆಂಬಲಿಸುವ ಅಭ್ಯರ್ಥಿಯ ವಿರುದ್ಧ ನಾವು ಹೋರಾಡುತ್ತೇವೆ" ಎಂದು ಬಿಜೆಪಿಯ ಕೃತಿ ಸೋಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಎನ್ ಸಿಪಿ (ಅಜಿತ್ ಪವಾರ್) ಅಭ್ಯರ್ಥಿಯಾಗಿ ಮಂಗಳವಾರ ನವಾಬ್ ಮಲಿಕ್ ನಾಮಪತ್ರ ಸಲ್ಲಿಸಿದ್ದಾರೆ. ತಮ್ಮ ನಾಮಪತ್ರ ಸಲ್ಲಿಸಿದ ಬಳಿಕ ಮಾತನಾಡಿದ ಅವರು, "ಮನ್ಖುರ್ದ್ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಎನ್ ಸಿಪಿ ಅಭ್ಯರ್ಥಿಯಾಗಿ ನಾಮಪತ್ರವನ್ನು ಇಂದು ಸಲ್ಲಿಸಿದ್ದೇನೆ. ಪಕ್ಷೇತರ ಅಭ್ಯರ್ಥಿಯಾಗಿಯೂ ನಾಮಪತ್ರ ಸಲ್ಲಿಸಿದ್ದೇನೆ. ನಾನು ಎನ್ ಸಿಪಿಯ ಅಧಿಕೃತ ಅಭ್ಯರ್ಥಿ" ಎಂದು ಸ್ಪಷ್ಟಪಡಿಸಿದರು.
ಡಿಸಿಎಂ ಅಜಿತ್ ಪವಾರ್ ಹಾಗೂ ರಾಜ್ಯಸಭಾ ಸದಸ್ಯ ಪ್ರಫುಲ್ ಪಟೇಲ್ ಹಾಗೂ ಮುಖಂಡ ಸುನೀಲ್ ತತ್ಕರೆಯವರಿಗೆ ಕೃತಜ್ಞ ಎಂದು ಹೇಳಿದರು. ನಾನು ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ಅವರಿಗಿದೆ. ದೊಡ್ಡ ಸಂಖ್ಯೆಯ ಮತದಾರರು ನನ್ನ ಬೆಂಬಲಕ್ಕಿದ್ದಾರೆ. ಈ ಬಾರಿ ಮನ್ಖುರ್ದ್ ಶಿವಾಜಿನಗರ ಕ್ಷೇತ್ರದಿಂದ ಗೆಲ್ಲುವ ವಿಶ್ವಾಸವಿದೆ ಎಂದು ಹೇಳಿದರು.