ಹವಾಯಿ | ಲ್ಯಾಂಡಿಂಗ್ ಬಳಿಕ ಯುನೈಟೆಡ್ ಏರ್ ಲೈನ್ಸ್ ವಿಮಾನದ ಚಕ್ರದಡಿ ಮೃತದೇಹ ಪತ್ತೆ!
Photo | PTI
ಹವಾಯಿ : ಯುನೈಟೆಡ್ ಏರ್ ಲೈನ್ಸ್ ಜೆಟ್ ಲೈನರ್ ವಿಮಾನ ಹವಾಯಿ ದ್ವೀಪದಲ್ಲಿ ಇಳಿದ ನಂತರ ಅದರ ಚಕ್ರದಡಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ವಿಮಾನಯಾನ ಸಂಸ್ಥೆ ಬುಧವಾರ ತಿಳಿಸಿದೆ.
ಮಾಯಿಯಲ್ಲಿರುವ ಕಹುಲುಯಿ ವಿಮಾನ ನಿಲ್ದಾಣದಲ್ಲಿ ಯುನೈಟೆಡ್ ಏರ್ ಲೈನ್ಸ್ ಜೆಟ್ ಲೈನರ್ ವಿಮಾನದ ಚಕ್ರದಡಿಯಲ್ಲಿ ಮೃತದೇಹ ಪತ್ತೆಯಾಗಿದೆ. ಈ ವಿಮಾನ ಚಿಕಾಗೋದ ಓ ಹೇರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂದಿಳಿದಿತ್ತು. ವ್ಯಕ್ತಿಯು ಚಕ್ರದಡಿ ಯಾವಾಗ ಮತ್ತು ಹೇಗೆ ಸಿಲುಕಿಕೊಂಡಿದ್ದಾರೆ ಎಂಬುವುದು ಸ್ಪಷ್ಟವಾಗಿಲ್ಲ.
ಬೋಯಿಂಗ್ 787-10 ವಿಮಾನವು ಮಂಗಳವಾರ ಸ್ಥಳೀಯ ಕಾಲಮಾನ 9:31ಕ್ಕೆ ಚಿಕಾಗೋದಿಂದ ಹೊರಟು ಮಧ್ಯಾಹ್ನ 2:12ಕ್ಕೆ ಮಾಯಿಗೆ ಆಗಮಿಸಿದೆ. ಲ್ಯಾಂಡಿಂಗ್ ನಂತರ ವಿಮಾನದ ಸಿಬ್ಬಂದಿ ಕಂಪಾರ್ಟ್ಮೆಂಟ್ ನಲ್ಲಿ ಮೃತದೇಹವನ್ನು ಕಂಡುಕೊಂಡಿದ್ದಾರೆ ಎಂದು FlightAware ಸಂಸ್ಥೆಯು ತಿಳಿಸಿದೆ.
ಮಾಯಿ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ, ಮೃತದೇಹವನ್ನು ಗುರುತಿಸಲಾಗಿಲ್ಲ ಮತ್ತು ಸಾವಿನ ಕಾರಣವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ ಎಂದು ಮಾಯಿ ಪೊಲೀಸ್ ಇಲಾಖೆಯ ವಕ್ತಾರರಾದ ಅಲಾನಾ ಕೆ. ಪಿಕೊ ಹೇಳಿದ್ದಾರೆ.
ಯುನೈಟೆಡ್ ಏರ್ ಲೈನ್ಸ್ ಈ ಬಗ್ಗೆ ಪ್ರತಿಕ್ರಿಯಿಸಿ, ತನಿಖೆಗೆ ಸಂಪೂರ್ಣವಾಗಿ ಸಹಕರಿಸುವುದಾಗಿ ಹೇಳಿದೆ.