ಬ್ರಿಜ್ ಭೂಷಣ್ ರಿಂದ ಲೈಂಗಿಕ ದೌರ್ಜನ್ಯ : ಆತ್ಮಚರಿತ್ರೆ ʼವಿಟ್ನೆಸ್ʼ ನಲ್ಲಿ ಸಾಕ್ಷಿ ಮಲಿಕ್ ಗಂಭೀರ ಆರೋಪ
ಬ್ರಿಜ್ ಭೂಷಣ್ , ಸಾಕ್ಷಿ ಮಲಿಕ್ | PTI
ಹೊಸದಿಲ್ಲಿ : ಬಿಜೆಪಿಯ ಬ್ರಿಜ್ ಭೂಷಣ್ ಶರಣ್ ಸಿಂಗ್ ಲೈಂಗಿಕ ದೌರ್ಜನ್ಯದ ಬಗ್ಗೆ ಸಾಕ್ಷಿ ಮಲಿಕ್ ತನ್ನ ಆತ್ಮಚರಿತ್ರೆ ʼವಿಟ್ನೆಸ್ʼ(Witness)ನಲ್ಲಿ ಸ್ಪೋಟಕ ಅಂಶಗಳನ್ನು ಉಲ್ಲೇಖಿಸಿದ್ದು, ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದೆ.
2012ರಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್ ತನಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದಾರೆ ಎಂದು ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಆರೋಪಿಸಿದ್ದಾರೆ.
ಕಝಕಿಸ್ತಾನದ ಅಲ್ಮಾಟಿಯಲ್ಲಿ ನಡೆಯುತ್ತಿದ್ದ ಏಷ್ಯನ್ ಜೂನಿಯರ್ ಚಾಂಪಿಯನ್ ಶಿಪ್ ಅವಧಿಯಲ್ಲಿ ಬ್ರಿಜ್ ಭೂಷಣ್ ಶರಣ್ ಸಿಂಗ್, ಹೆತ್ತವರೊಂದಿಗೆ ಮಾತನಾಡುವ ನೆಪದಲ್ಲಿ ನನ್ನನ್ನು ಹೊಟೇಲ್ ರೂಂಗೆ ಕರೆಸಿಕೊಂಡಿದ್ದರು. ಸಿಂಗ್ ನನಗೆ ಹೆತ್ತವರೊಂದಿಗೆ ಸಂಪರ್ಕಿಸಲು ಅವಕಾಶ ಮಾಡಿಕೊಟ್ಟರು. ನಾನು ಅವರೊಂದಿಗೆ ನನ್ನ ಪಂದ್ಯ ಮತ್ತು ಪದಕದ ಬಗ್ಗೆ ಹೇಳಿದಾಗ, ಏನಾದರೂ ಕೆಟ್ಟದ್ದು ಸಂಭವಿಸಬಹುದು ಎಂದುಕೊಂಡಿದ್ದೆ. ಅಷ್ಟರಲ್ಲೇ ಅವರೂ ಕೂಡ ರೂಂ ಒಳಗೆ ಬಂದರು. ನಾನು ಕರೆಯನ್ನು ಕಟ್ ಮಾಡಿದ ತಕ್ಷಣ, ಬೆಡ್ ಮೇಲೆ ಕುಳಿತಿದ್ದ ನನಗೆ ಅವರು ಕಿರುಕುಳ ನೀಡಲು ಪ್ರಯತ್ನಿಸಿದರು. ನಾನು ಅವರನ್ನು ತಳ್ಳಿ ಅಳಲು ಪ್ರಾರಂಭಿಸಿದೆ. ಬ್ರಿಜ್ ಭೂಷಣ್ ಪ್ರಭಾವಿಯಾಗಿದ್ದರಿಂದ ನಾನು ಮೌನವಾಗಿದ್ದೆ. ಅವರು ನನ್ನ ವೃತ್ತಿಜೀವನವನ್ನು ಕೊನೆಗೊಳಿಸಬಹುದೆಂದು ಭಾವಿಸಿದ್ದೆ. ಹಾಗಾಗಿ ಆ ಸಮಯದಲ್ಲಿ ನಾನು ಸುಮ್ಮನಿದ್ದೆ ಎಂದು ಸಾಕ್ಷಿ ಮಲಿಕ್ ತನ್ನ ಆತ್ಮಚರಿತ್ರೆಯಲ್ಲಿ ಬರೆದಿದ್ದಾರೆ.
ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷರಾಗಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದರು. ಡಬ್ಲ್ಯುಎಫ್ಐನಿಂದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಜಾಗೊಳಿಸುವಂತೆ ಮತ್ತು ಬಂಧಿಸುವಂತೆ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದರು.
2023ರ ಮೇ.28ರಂದು ಹೊಸ ಸಂಸತ್ ಭವನದ ಕಡೆಗೆ ಕುಸ್ತಿಪಟುಗಳು ನಡೆಸುತ್ತಿದ್ದ ಮೆರವಣಿಗೆಯನ್ನು ಪೊಲೀಸರು ತಡೆದಿದ್ದರು. ಪ್ರತಿಭಟನೆ ದೇಶದಲ್ಲಿ ಭಾರೀ ಸದ್ದು ಮಾಡಿತ್ತು. ಮಹಿಳಾ ಕುಸ್ತಿಪಟುಗಳು ನೀಡಿದ ದೂರಿನ ಮೇರೆಗೆ ದಿಲ್ಲಿ ಪೊಲೀಸರು ಬ್ರಿಜ್ ಭೂಷಣ್ ವಿರುದ್ಧ ಪೊಕ್ಸೊ ಸೇರಿ ಎರಡು ಎಫ್ಐಆರ್ ಗಳನ್ನು ದಾಖಲಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದಿಲ್ಲಿ ಪೊಲೀಸರು 500 ಪುಟಗಳ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ದಿಲ್ಲಿ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿದೆ.