ಕುಸ್ತಿಪಟುಗಳು ಕಾಂಗ್ರೆಸ್ ತೊಡೆ ಮೇಲಿದ್ದಾರೆ: ಬ್ರಿಜ್ ಭೂಷಣ್ ಆರೋಪ
Photo: PTI
ಹೊಸದಿಲ್ಲಿ: ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಬ್ರಿಜ್ ಭೂಷಣ್ ಸಿಂಗ್ ಶರಣ್ ಅವರ ಆಪ್ತ ಸಂಜಯ್ ಸಿಂಗ್ ವಿರುದ್ಧ ಕುಸ್ತಿಪಟುಗಳು ತಮ್ಮ ಪ್ರತಿಭಟನೆ ಮುಂದುವರಿಸಿರುವ ಬೆನ್ನಿಗೇ, "ಕುಸ್ತಿಪಟುಗಳು ಕಾಂಗ್ರೆಸ್ ತೊಡೆಯ ಮೇಲೆ ಕುಳಿತಿದ್ದಾರೆ. ಅವರನ್ನು ಯಾರೂ ಬೆಂಬಲಿಸುವುದಿಲ್ಲ" ಎಂದು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್ ಶರಣ್ ಹೇಳಿದ್ದಾರೆ ಎಂದು indiatoday.in ವರದಿ ಮಾಡಿದೆ.
"ಪ್ರತಿಭಟನಾ ನಿರತ ಕುಸ್ತಿ ಪಟುಗಳು ಕಾಂಗ್ರೆಸ್ ತೊಡೆಯ ಮೇಲೆ ಕುಳಿತಿರುವುದರಿಂದ, ಅವರಿಗೆ ಇತರ ಕುಸ್ತಿಪಟುಗಳು ಬೆಂಬಲಿಸುತ್ತಿಲ್ಲ" ಎಂದಿರುವ ಮಾಜಿ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರೂ ಆದ ಬ್ರಿಜ್ ಭೂಷಣ್, "ಈಗ ನಾನು ಅವರೊಂದಿಗೆ ಹೋರಾಡಲು ನೇಣು ಹಾಕಿಕೊಳ್ಳಲೆ?" ಎಂದೂ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
"ಕುಸ್ತಿಯ ಅಭಿವೃದ್ಧಿಯು ಕಳೆದ 11 ತಿಂಗಳಿನಿಂದ ತೊಂದರೆಗೊಳಗಾಗಿದೆ. ನ್ಯಾಯಯುತ ಚುನಾವಣೆ ನಡೆದಿದೆ ಹಾಗೂ ನಮ್ಮ ಬಣದ ಸಂಜಯ್ ಸಿಂಗ್ ಅಲಿಯಾಸ್ ಬಬ್ಲು ಸ್ಪಷ್ಟ ಬಹುಮತದೊಂದಿಗೆ ಚುನಾಯಿತರಾಗಿದ್ದಾರೆ. ಪ್ರತಿಸ್ಪರ್ಧಿ ಅಭ್ಯರ್ಥಿಯು 33 ಮತಗಳಿಂದ ಪರಾಭವಗೊಂಡಿದ್ದಾರೆ" ಎಂದಿರುವ ಬ್ರಿಜ್ ಭೂಷಣ್, ನಮ್ಮ ಬಣವು ಕ್ರೀಡೆಯನ್ನು ಉತ್ತಮಗೊಳಿಸುವ ದಿಕ್ಕಿನತ್ತ ಕೆಲಸ ಮಾಡುವ ಗುರಿ ಹೊಂದಿದೆ ಎಂದೂ ಹೇಳಿದ್ದಾರೆ.
ಇದಕ್ಕೂ ಮುನ್ನ, ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಬ್ರಿಜ್ ಭೂಷಣ್ ಅವರನ್ನು ಬಂಧಿಸಬೇಕು ಎಂದು ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್ ಹಾಗೂ ಬಜರಂಗ್ ಪುನಿಯಾ ಸೇರಿದಂತೆ ಹಲವಾರು ಹೆಸರಾಂತ ಒಲಿಂಪಿಕ್ ಕ್ರಿಡಾಪಟುಗಳು ಆಗ್ರಹಿಸಿದ್ದರು. ಇದಾದ ನಂತರ ಭಾರತೀಯ ಕುಸ್ತಿ ಒಕ್ಕೂಟಕ್ಕೆ ನಡೆದಿರುವ ಚುನಾವಣೆಯಲ್ಲಿ ಬ್ರಿಜ್ ಭೂಷಣ್ ಸಿಂಗ್ ಶರಣ್ ಅವರ ಆಪ್ತ ಸಂಜಯ್ ಸಿಂಗ್ ಭಾರಿ ಬಹುಮತದೊಂದಿಗೆ ಭಾರತೀಯ ಕುಸ್ತಿ ಒಕ್ಕೂಟದ ಅಧ್ಯಕ್ಷರಾಗಿ ಆಯ್ಜೆಯಾಗಿದ್ದಾರೆ. ಇದು ಮತ್ತೊಂದು ಸುತ್ತಿನ ವಿವಾದಕ್ಕೆ ನಾಂದಿ ಹಾಡಿದೆ.