ಬಿಎಸ್ಪಿ ಸಂಸದ ದಾನಿಶ್ ಅಲಿ ಅವರ ನಡವಳಿಕೆಯ ಬಗ್ಗೆಯೂ ತನಿಖೆಯಾಗಬೇಕು: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಆಗ್ರಹ
photo: Twitter@NDTV
ಹೊಸದಿಲ್ಲಿ: ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ತಮ್ಮ ಪಕ್ಷದ ಸಹೋದ್ಯೋಗಿ ರಮೇಶ್ ಬಿಧುರಿ ಬಿಎಸ್ಪಿ ಸಂಸದರ ವಿರುದ್ಧ ಕೋಮುವಾದಿ ಹೇಳಿಕೆ ನೀಡಿದ್ದನ್ನು ಖಂಡಿಸಿದ್ದಾರೆ, ಆದರೆ ಬಿಎಸ್ಪಿ ಸಂಸದರ ನಡವಳಿಕೆಯ ಬಗ್ಗೆಯೂ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಬಿಧುರಿ ಅವರು ಲೋಕಸಭೆಯಲ್ಲಿ ಚಂದ್ರಯಾನ-3ರ ಯಶಸ್ಸಿನ ಕುರಿತು ಚರ್ಚೆ ನಡೆಸುತ್ತಿದ್ದಾಗ ಮಾಯಾವತಿಯವರ ಬಹುಜನ ಸಮಾಜ ಪಕ್ಷದ ಸಂಸದ ದಾನಿಶ್ ಅಲಿಯವರನ್ನು ಗುರಿಯಾಗಿರಿಸಿ ಪದೇ ಪದೇ ಭಯೋತ್ಪಾದಕ ಎಂದು ಕರೆಯುತ್ತಿರುವುದು ಕಂಡುಬಂದಿತು, ಇದಕ್ಕೆ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಕಠಿಣ ಎಚ್ಚರಿಕೆಯನ್ನು ನೀಡಿದರು. ಬಿಧುರಿ ಅವರ ಹೇಳಿಕೆಗಳನ್ನು ದಾಖಲೆಗಳಿಂದ ತೆಗೆದುಹಾಕಲಾಗಿದೆ.
ಬಿಧುರಿ ಅವರ ಹೇಳಿಕೆಗಳು ಸುಸಂಸ್ಕೃತ ಸಮಾಜಕ್ಕೆ ಸೂಕ್ತವಲ್ಲ ಎಂದು ದುಬೆ ಹೇಳಿದರು
‘’ಲೋಕಸಭೆಯಲ್ಲಿ ರಮೇಶ್ ಬಿಧುರಿ ನೀಡಿದ ಹೇಳಿಕೆಯನ್ನು ಯಾವುದೇ ಸುಸಂಸ್ಕೃತ ಸಮಾಜ ಒಪ್ಪುವುದಿಲ್ಲ. ಇದಕ್ಕೆ ಯಾವುದೇ ಖಂಡನೆ ಸಾಕಾಗುವುದಿಲ್ಲ. ಆದರೆ ಸಂಸದ ದಾನಿಶ್ ಅಲಿ ಅವರ ಅಸಭ್ಯ ಮಾತುಗಳು ಹಾಗೂ ನಡವಳಿಕೆಯನ್ನು ಲೋಕಸಭೆ ಸ್ಪೀಕರ್ ತನಿಖೆ ಮಾಡಬೇಕು ”ಎಂದು ದುಬೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
ಬಿಧುರಿ ಹೇಳಿಕೆಗೆ ಭಾರೀ ವಿರೋಧ ಎದುರಿಸುತ್ತಿರುವ ಬಿಜೆಪಿ ಬಿಧುರಿಗೆ ಶೋಕಾಸ್ ನೋಟಿಸ್ ಕಳುಹಿಸಿದೆ ಹಾಗೂ 15 ದಿನಗಳಲ್ಲಿ ಅವರ ಅಸಂಸದೀಯ ಭಾಷೆಯ ಬಗ್ಗೆ ವಿವರಣೆಯನ್ನು ನೀಡುವಂತೆ ಕೇಳಿದೆ. ಬಿಧುರಿಯ ವಿವಾದಾತ್ಮಕ ಹೇಳಿಕೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಸದನದಲ್ಲಿ ವಿಷಾದ ವ್ಯಕ್ತಪಡಿಸಿದ್ದರು.