ಕೆನರಾ ಬ್ಯಾಂಕ್ ನಲ್ಲಿ ಬುರ್ಖಾಧಾರಿ ಮಹಿಳೆಗೆ ಪ್ರವೇಶ ನಿರಾಕರಣೆ: ಬುರ್ಖಾಗೆ ಅನುಮತಿಯಿಲ್ಲವೆಂದ ಭದ್ರತಾ ಸಿಬ್ಬಂದಿ
screengrab : twitter \ @azizkavish
ಜೈಪುರ: ಜೈಪುರದ ಜಗತ್ ಪುರ ಪ್ರದೇಶದಲ್ಲಿನ ಕೆನರಾ ಬ್ಯಾಂಕ್ ಶಾಖೆಯೊಂದರಲ್ಲಿ ಬುರ್ಖಾಧಾರಿ ಮಹಿಳೆಯೊಬ್ಬರಿಗೆ ಪ್ರವೇಶ ನಿರಾಕರಿಸಿರುವ ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ಆ ಐದು ನಿಮಿಷಗಳ ವಿಡಿಯೊದಲ್ಲಿ, ಮಹಿಳೆಯೊಬ್ಬರು ಬ್ಯಾಂಕ್ ಗೆ ಪ್ರವೇಶಿಸಲು ಮನವಿ ಮಾಡುತ್ತಿದ್ದು, ಅದಕ್ಕೆ ಪ್ರತಿಯಾಗಿ ಭದ್ರತಾ ಸಿಬ್ಬಂದಿಯು, ಮಾರ್ಗಸೂಚಿಗಳ ಪ್ರಕಾರ, ಬುರ್ಖಾಗೆ ಅನುಮತಿ ಇಲ್ಲದೆ ಇರುವುದರಿಂದ ಬುರ್ಖಾವನ್ನು ತೆಗೆಯಬೇಕು ಎಂದು ಆ ಮಹಿಳೆಗೆ ಸೂಚಿಸುತ್ತಿದ್ದಾರೆ. “ಬುರ್ಖಾ ಅಲೋಡ್ ನಹೀಂ ಹೈ, ಹಮ್ಕೊ ಗೈಡ್ ಲೈನ್ಸ್ ಮಿಲಿ ಹೈ (ಬುರ್ಖಾಗೆ ಅನುಮತಿಯಿಲ್ಲ, ನಮಗೆ ಮಾರ್ಗಸೂಚಿ ದೊರೆತಿದೆ) ಎಂದು ಆತ ದೃಢವಾಗಿ ಹೇಳುತ್ತಾ, ಬ್ಯಾಂಕ್ ನ ಪ್ರವೇಶ ದ್ವಾರವನ್ನು ಮುಚ್ಚಿದ್ದಾನೆ. ಆದರೆ, ಬುರ್ಖಾವನ್ನು ನಿಷೇಧಿಸಲಾಗಿದೆ ಎಂಬ ಮಾರ್ಗಸೂಚಿಯ ಪುರಾವೆಯನ್ನು ಒದಗಿಸುವಂತೆ ಆ ಮಹಿಳೆಯು ಒತ್ತಿ ಕೇಳತೊಡಗಿದಾಗ, ಕೆಲವೇ ಕ್ಷಣಗಳಲ್ಲಿ ಪ್ರವೇಶ ದ್ವಾರ ತೆರೆದಿರುವ ಆತ, ಒಂದು ವೇಳೆ ಮುಖ್ಯಾಧಿಕಾರಿಯು ಒಪ್ಪಿಗೆ ನೀಡಿದರೆ ಒಳ ಹೋಗಲು ಅವಕಾಶ ನೀಡುತ್ತೇನೆ ಎಂದು ತಿಳಿಸುತ್ತಿರುವುದು ಸೆರೆಯಾಗಿದೆ.
ಆಕೆ, ಮುಖ್ಯಾಧಿಕಾರಿಗಾಗಿ ಪ್ರವೇಶ ದ್ವಾರದ ಹೊರಗಡೆ ಕಾಯುವಾಗ, ಬ್ಯಾಂಕ್ ಆವರಣವನ್ನು ಎರಡು ಅಥವಾ ಮೂರು ಮಂದಿ ಪ್ರವೇಶಿಸುತ್ತಿರುವುದನ್ನು ಆ ವಿಡಿಯೊದಲ್ಲಿ ನೋಡಬಹುದಾಗಿದೆ. ನಂತರ, ಓರ್ವ ವ್ಯಕ್ತಿಯು ಆ ಮಹಿಳೆಯನ್ನು ತನ್ನೊಂದಿಗೆ ಬ್ಯಾಂಕ್ ವ್ಯವಸ್ಥಾಪಕರ ಕಚೇರಿಗೆ ಕರೆದೊಯ್ದಿದ್ದು, ಅಲ್ಲಿ ಬುರ್ಖಾ ವಿರುದ್ಧ ಇರುವ ಮಾರ್ಗಸೂಚಿಗಳನ್ನು ತೋರಿಸುವಂತೆ ಆ ಮಹಿಳೆಯು ಪಟ್ಟು ಹಿಡಿದಿದ್ದಾಳೆ. ಆದರೆ, ನಡೆದಿರುವ ಪ್ರಮಾದವನ್ನು ಒಪ್ಪಿಕೊಳ್ಳದೆ, ರಕ್ಷಣಾತ್ಮಕ ಹೇಳಿಕೆಗೆ ಮೊರೆ ಹೋಗಿರುವ ಆ ವ್ಯವಸ್ಥಾಪಕರು, ಆಕೆಯನ್ನು ಬ್ಯಾಂಕ್ ಆವರಣದ ಒಳಗೆ ಬಿಡದಿರಲು ಭೋಜನ ವಿರಾಮ ಕಾರಣವೇ ಹೊರತು ಆಕೆ ಬುರ್ಖಾ ಧರಿಸಿರುವುದಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಅಲ್ಲದೆ, ಬ್ಯಾಂಕ್ ಆವರಣದಲ್ಲಿ ಚಿತ್ರೀಕರಿಸಿದಂತೆ ಆಕೆಗೆ ಮನವಿ ಮಾಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಮಹಿಳೆಯು, ನಾನು ಬೇರೆ ಕೆಲಸದ ನಿಮಿತ್ತ ಬ್ಯಾಂಕ್ ನಿಂದ ಹೊರ ಬಂದ ಕೂಡಲೇ ಬ್ಯಾಂಕ್ ಅನ್ನು ಬಂದ್ ಮಾಡಲಾಯಿತು. ಆದರೆ, ತನ್ನೊಂದಿಗೆ ವಾಗ್ವಾದಕ್ಕಿಳಿದ ವ್ಯವಸ್ಥಾಪಕರು, ಬ್ಯಾಂಕ್ ಆವರಣದೊಳಗೆ ಚಿತ್ರೀಕರಿಸಬಾರದು ಎಂದು ಆಕೆಗೆ ತಾಕೀತು ಮಾಡಿದ್ದು, ಭೋಜನ ವಿರಾಮದ ಕಾರಣಕ್ಕಾಗಿ ಬ್ಯಾಂಕ್ ಪ್ರವೇಶ ದ್ವಾರವನ್ನು ಮುಚ್ಚಲಾಗಿತ್ತೇ ಹೊರತು ಆಕೆಯಿಂದಲ್ಲ ಎಂದು ಸಮರ್ಥಿಸಿಕೊಂಡರು ಎಂದು ಆರೋಪಿಸಿದ್ದಾರೆ. ಆ ವೀಡಿಯೊದಲ್ಲಿ, ಮತ್ತಿಬ್ಬರು ಬ್ಯಾಂಕ್ ಉದ್ಯೋಗಿಗಳು ಮಧ್ಯಪ್ರವೇಶಿಸಿ, ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ, ಬುರ್ಖಾಧಾರಿ ಮಹಿಳೆಯು ತನ್ನನ್ನು ಉದ್ದೇಶಪೂರ್ವಕವಾಗಿ ಹೊರಗೆ ನಿಲ್ಲಿಸಲಾಗಿದೆ ಎಂದು ವ್ಯವಸ್ಥಾಪಕರನ್ನು ದೂರುವುದನ್ನು ಮುಂದುವರಿಸಿರುವುದನ್ನು ಕಾಣಬಹುದಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು, ಘಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯು ಘಟನೆಯ ಕುರಿತು ಯಾವುದೇ ದೂರು ನೀಡಿಲ್ಲ ಎಂದು ಹೇಳಿದ್ದು, ಭದ್ರತಾ ಕಾರಣಗಳಿಗಾಗಿ ಬ್ಯಾಂಕ್ ಇಂತಹ ಕ್ರಮ ಕೈಗೊಂಡಿದೆ ಎಂದು ಸಮಜಾಯಿಷಿ ನೀಡಿದ್ದಾರೆ.