ಕಂದಕಕ್ಕೆ ಉರುಳಿದ ಬಸ್: ಮೂವರು ಬಿಎಸ್ಎಫ್ ಯೋಧರು ಮೃತ್ಯು
ಶ್ರೀನಗರ: ಚುನಾವಣಾ ಕರ್ತವ್ಯಕ್ಕಾಗಿ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ಸು ಜಮ್ಮು ಕಾಶ್ಮೀರದ ಬುಡಗಾಂ ಜಿಲ್ಲೆಯಲ್ಲಿ ಕಂದಕಕ್ಕೆ ಉರುಳಿ ಸಂಭವಿಸಿದ ದುರಂತದಲ್ಲಿ ಕನಿಷ್ಠ ಮೂರು ಮಂದಿ ಬಿಎಸ್ಎಫ್ ಯೋಧರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇತರ 32 ಮಂದಿ ಗಾಯಗೊಂಡಿದ್ದಾರೆ.
ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ ಕರ್ತವ್ಯ ನಿರ್ವಹಿಸಲು ಬಿಎಸ್ಎಫ್ ಸಿಬ್ಬಂದಿಯನ್ನು ಈ ಬಸ್ಸಿನಲ್ಲಿ ಕರೆದೊಯ್ಯಲಾಗುತ್ತಿತ್ತು. ಸೆಪ್ಟೆಂಬರ್ 25ರಂದು ಎರಡನೇ ಹಂತದ ಮತದಾನ ನಡೆಯಲಿದೆ. ಸುಮಾರು 35 ಮಂದಿ ಯೋಧರು ಗಾಯಗೊಂಡಿದ್ದು, ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೂವರು ಯೋಧರು ಅಸುನೀಗಿದ್ದಾರೆ ಎಂದು ಅಧಿಕೃತ ಮೂಲಗಳು ಹೇಳಿವೆ. ಉಳಿದವರ ದೇಹಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ದುರಂತದ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿರುವ ಜಮ್ಮು- ಕಾಶ್ಮೀರ ಪೊಲೀಸ್ ಮುಖ್ಯಸ್ಥ ಆರ್.ಆರ್.ಸ್ವೈನ್, ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಐಜಿಪಿ ವಿ.ಕೆ.ಬಿರ್ಡಿ ಮತ್ತು ಬಿಎಸ್ಎಫ್ ಐಜಿಯವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು.