ಉಪಚುನಾವಣೆಯಲ್ಲಿ ಬಿಜೆಪಿಗೆ 20, ಕಾಂಗ್ರೆಸ್ಗೆ 7 ಸ್ಥಾನ | ಪಶ್ಚಿಮ ಬಂಗಾಳದಲ್ಲಿ ಮುಂದುವರಿದ ಟಿಎಂಸಿ ಪಾರಮ್ಯ
ಸಾಂದರ್ಭಿಕ ಚಿತ್ರ | PTI
ಹೊಸದಿಲ್ಲಿ : ಕರ್ನಾಟಕ ಸೇರಿದಂತೆ ದೇಶಾದ್ಯಂತ 48 ವಿಧಾನಸಬಾ ಕ್ಷೇತ್ರಗಳು ಹಾಗೂ ಎರಡು ಲೋಕಸಭಾ ಕ್ಷೇತ್ರಗಳ ಚುನಾವಣಾ ಫಲಿತಾಂಶ ಶನಿವಾರ ಪ್ರಕಟವಾಗಿದ್ದು, ಬಿಜೆಪಿ 20 ವಿಧಾನಸಭಾ ಕ್ಷೇತ್ರಗಳಲ್ಲಿಗೆಲುವು ಸಾಧಿಸಿದೆ. ಪಶ್ಚಿಮಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿಯು ಎಲ್ಲಾ 6 ಕ್ಷೇತ್ರಗಳನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡಿದೆ. ಕಾಂಗ್ರೆಸ್ ಪಕ್ಷವು ಏಳು ಹಾಗೂ ಆಮ್ ಆದ್ಮಿ ಪಕ್ಷವು ಮೂರು ಕ್ಷೇತ್ರಗಳಲ್ಲಿ ಜಯಗಳಿಸಿದೆ.
ರಾಜಸ್ಥಾನದಲ್ಲಿ ಆಡಳಿತಾರೂಢ ಬಿಜೆಪಿಯು 5 ಸ್ಥಾನಗಳನ್ನು ಗೆದ್ದುಕೊಂಡಿದೆ. ಇದೇ ವೇಳೆ ಭಾರತೀಯ ಆದಿವಾಸಿ ಪಕ್ಷವು(ಬಿಎಪಿ) ಎರಡು ಸ್ಥಾನಗಳನ್ನು ಗೆದ್ದು ಗಮನಾರ್ಹ ಸಾಧನೆ ಮಾಡಿದೆ.ಮುಂದಿನ ವರ್ಷ ಚುನಾವಣೆಯನ್ನೆದುರಿಸಲಿರುವ ಉತ್ತರಪ್ರದೇಶದಲ್ಲಿ ಬಿಜೆಪಿ 6 ಸ್ಥಾನಗಳನ್ನು ಗೆದ್ದುಕೊಂಡಿದೆ.
ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಮೈತ್ರಿಕೂಟ ನಾಲ್ಕು ಸ್ಥಾನಗಳನ್ನು ಗೆದ್ದಿದೆ. ಬಿಜೆಪಿಯು ಅಸ್ಸಾಂನಲ್ಲಿ ಎರಡು, ಚತ್ತೀಸ್ಗಡ, ಮಧ್ಯಪ್ರದೇಶ, ಉತ್ತರಾಖಂಡ, ಗುಜರಾತ್ ನಲ್ಲಿ ತಲಾ 1 ಸ್ಥಾನಗಳಲ್ಲಿ ಜಯಗಳಿಸಿದೆ. ಇತ್ತ ಕಾಂಗ್ರೆಸ್ ಪಕ್ಷವು ಕರ್ನಾಟಕದ 3, ಪಂಜಾಬ್, ಕೇರಳದಲ್ಲಿ ತಲಾ ಒಂದು ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಪಂಜಾಬ್ನವಲ್ಲಿ ಆಡಳಿತಾರೂಢ ಆಮ್ಆದ್ಮಿ ಪಕ್ಷವು ಮೂರು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರಿದೆ. ಸಿಕ್ಕಿಂನಲ್ಲಿ ಎರಡೂ ಕ್ಷೇತ್ರಗಳನ್ನು ಆಡಳಿತಾರೂಢ ಎಸ್ಕೆಎಂ ಗೆಲುವು ಸಾಧಿಸಿದೆ.
ಅಸ್ಸಾಂನ,ಬಿಹಾರ, ಚತ್ತೀಸ್ಗಡ, ಗುಜರಾತ್,ಕರ್ನಾಟಕ, ಕೇರಳ, ಮಧ್ಯಪ್ರದೇಶ, ಮೇಘಾಲಯ, ಪಂಜಾಬ್, ರಾಜಸ್ತಾನ, ಸಿಕ್ಕಿಂ, ಉತ್ತರಾಖಂಡ, ಉತ್ತರಪ್ರದೇಶ ರಾಜ್ಯಗಳ ಒಟ್ಟು 48 ವಿಧಾಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆದಿವೆ.
►ಉತ್ತರಪ್ರದೇಶ | 9ರಲ್ಲಿ 6 ಸ್ಥಾನಗಳನ್ನು ಗೆದ್ದ ಬಿಜೆಪಿ
ಉತ್ತರಪ್ರದೇಶದಲ್ಲಿ ಇತ್ತೀಚೆಗೆ ಒಂಭತ್ತು ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ)ವು ಆರು ಕ್ಷೇತ್ರಗಳಲ್ಲಿ ಜಯ ಗಳಿಸಿದೆ. ಇದರೊಂದಿಗೆ ಬಿಜೆಪಿಯ ಹಿಂದಿ ಭದ್ರ ಕೋಟೆಯ ಪ್ರಮುಖ ರಾಜ್ಯದ ಮೇಲೆ ನಿಯಂತ್ರಣವನ್ನು ಗಳಿಸುವಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಯಶಸ್ವಿಯಾಗಿದ್ದಾರೆ.
ಬಿಜೆಪಿಯು ಘಾಝಿಯಾಬಾದ್, ಖೈರ್, ಫೂಲ್ಪುರ, ಕುಂಡರ್ಕಿ, ಕಾಟೆಹಾರಿ ಮತ್ತು ಮಝಾವನ್ ಕ್ಷೇತ್ರಗಳಲ್ಲಿ ವಿಜಯಿಯಾಗಿದೆ.
ಬಿಜೆಪಿಯ ಮಿತ್ರಪಕ್ಷ ರಾಷ್ಟ್ರೀಯ ಲೋಕದಳ ಮೀರಪುರದಲ್ಲಿ ವಿಜಯಿಯಾಗಿದೆ.
ಆರು ತಿಂಗಳ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿದ್ದ ಸಮಾಜವಾದಿ ಪಕ್ಷವು, ಹಾಲಿ ವಿಧಾನಸಭಾ ಉಪಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆದ್ದಿದೆ. ಅದು ಕರ್ಹಲ್ ಮತ್ತು ಸಿಶಮಾವು ಕ್ಷೇತ್ರಗಳನ್ನು ಜಯಿಸಿದೆ.
ಕರ್ಹಲ್ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ರ ಭದ್ರಕೋಟೆಯಾಗಿದೆ. ಅಲ್ಲಿ 2022ರ ಚುನಾವಣೆಯಲ್ಲಿ ಅಖಿಲೇಶ್ ಸುಮಾರು 70,000 ಮತಗಳ ಅಂತರದಿಂದ ಗೆದ್ದಿದ್ದರು.
ಅಖಿಲೇಶ್ ಯಾದವ್ ಸೇರಿದಂತೆ ಹಾಲಿ ಶಾಸಕರು ಸಂಸದರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಉಪಚುನಾವಣೆ ನಡೆಸಲಾಗಿತ್ತು.
ಮೀರಪುರದಲ್ಲಿ ಆರ್ಎಲ್ಡಿಯ ಮಿತ್ಲೇಶ್ ಪಾಲ್ ಸಮಾಜವಾದಿ ಪಕ್ಷದ ಸುಂಬುಲ್ ರಾಣಾರನ್ನು ಸೋಲಿಸಿದ್ದಾರೆ.
ಕುಂಡರ್ಕಿಯಲ್ಲಿ ಬಿಜೆಪಿಯ ರಮ್ವೀರ್ ಸಿಂಗ್ ಸಮಾಜವಾದಿ ಪಕ್ಷದ ಮುಹಮ್ಮದ್ ರಿಝ್ವಾನ್ರನ್ನು ಸೋಲಿಸಿದ್ದಾರೆ. ಘಾಝಿಯಾಬಾದ್ ಸ್ಥಾನವನ್ನು ಬಿಜೆಪಿ ಉಳಿಸಿಕೊಂಡಿದೆ. ಪಕ್ಷದ ಸಂಜೀವ್ ಶರ್ಮ ಸಮಾಜವಾದಿ ಪಕ್ಷದ ಸಿಂಗ್ ಜಾಟವ್ರನ್ನು 63,000ಕ್ಕೂ ಅಧಿಕ ಮತಗಳ ಅಂತರದಿಂದ ಮಣಿಸಿದ್ದಾರೆ.
ಖೈರ್ ಮತ್ತು ಫೂಲ್ಪುರ ಕ್ಷೇತ್ರಗಳಲ್ಲಿ, ಬಿಜೆಪಿಯ ಸುರೇಂದ್ರ ದಿಲೆರ್ ಮತ್ತು ದೀಪಕ್ ಪಟೇಲ್ ಕ್ರಮವಾಗಿ ಸಮಾಜವಾದಿ ಪಕ್ಷದ ಚಾರು ಕೈನ್ ಮತ್ತು ಮುಹಮ್ಮದ್ ಸಿದ್ದೀಕ್ರನ್ನು ಕ್ರಮವಾಗಿ ಸುಮಾರು 40,000 ಮತ್ತು 12,000 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಗೆದ್ದಿದ್ದ ಕಟೆಹಾರಿ ಕ್ಷೇತ್ರವನ್ನು ಈ ಬಾರಿ ಬಿಜೆಪಿ ಗೆದ್ದಿದೆ. ಬಿಜೆಪಿ ಅಭ್ಯರ್ಥಿ ಧರ್ಮರಾಜ್ ನಿಶಾದ್ ಸಮಾಜವಾದಿ ಪಕ್ಷದ ಶೋಭಾವತಿ ವರ್ಮರನ್ನು ಸುಮಾರು 30,000 ಮತಗಳಿಂದ ಪರಾಭವಗೊಳಿಸಿದ್ದಾರೆ.
ಮಝವಾನ್ ಕ್ಷೇತ್ರದಲ್ಲಿ, ಬಿಜೆಪಿಯ ಶುಚಿಸ್ಮಿತಾ ಮೌರ್ಯ ಸಮಾಜವಾದಿ ಪಕ್ಷದ ಡಾ. ಜ್ಯೋತಿ ಬಿಂಡ್ರನ್ನು ಸುಮಾರು 5,000 ಮತಗಳಿಂದ ಹಿಮ್ಮೆಟ್ಟಿಸಿದ್ದಾರೆ.
ಒಟ್ಟಾರೆ, ಬಿಜೆಪಿಯು ತಾನು 2022ರಲ್ಲಿ ಗೆದ್ದಿದ್ದ ಮೂರು ಸ್ಥಾನಗಳನ್ನು ಉಳಿಸಿಕೊಂಡಿದೆ ಹಾಗೂ ಸಮಾಜವಾದಿ ಪಕ್ಷದ ಎರಡು ಮತ್ತು ನಿಶಾದ್ ಪಕ್ಷದ ಒಂದು ಸ್ಥಾನವನ್ನು ಕಸಿದುಕೊಂಡಿದೆ.
►ಕೇರಳ | ಚೆಳಕ್ಕಾರದಲ್ಲಿ ಸಿಪಿಎಮ್ಗೆ ಜಯ
ಕೇರಳದಲ್ಲಿ, ಆಡಳಿತಾರೂಢ ಸಿಪಿಎಮ್ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ (ಎಲ್ಡಿಎಫ್)ದ ಅಭ್ಯರ್ಥಿ ಯು. ಆರ್. ಪ್ರದೀಪ್ ಚೆಳಕ್ಕಾರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜಯ ಗಳಿಸಿದ್ದಾರೆ. ಪ್ರದೀಪ್ ಎದುರಾಳಿ ಕಾಂಗ್ರೆಸ್ ಪಕ್ಷದ ರಮ್ಯಾ ಹರಿದಾಸ್ರನ್ನು ಸುಮಾರು 12,000 ಮತಗಳ ಅಂತರದಿಂದ ಸೋಲಿಸಿದರು.
ಕಾಂಗ್ರೆಸ್ ಈ ಸ್ಥಾನವನ್ನು ಕೊನೆಯದಾಗಿ ಗೆದ್ದಿದ್ದು 1991ರಲ್ಲಿ.
ಈ ವಿಜಯವು ಸಿಪಿಎಮ್ ಪಕ್ಷಕ್ಕೆ ಅತ್ಯಂತ ಅಗತ್ಯವಾಗಿತ್ತು. ಒಂದು ವೇಳೆ ಪಕ್ಷವು ಇಲ್ಲಿ ಸೋತಿದ್ದರೆ, ಅದು ಎಂಟು ವರ್ಷಗಳ ಕಾಲ ಆಳ್ವಿಕೆ ನಡೆಸಿದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸರಕಾರದ ವಿರುದ್ಧದ ಆಡಳಿತ ವಿರೋಧಿ ಅಲೆ ಎಂಬುದಾಗಿ ವ್ಯಾಖ್ಯಾನಿಸಲ್ಪಡುತ್ತಿತ್ತು.
►ಪಾಲಕ್ಕಾಡ್ ಕಾಂಗ್ರೆಸ್ಗೆ
ಕೇರಳದ ಪಾಲಕ್ಕಾಡ್ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ನ ರಾಹುಲ್ ಮಾಂಕೂಟತ್ತಿಲ್ ಬಿಜೆಪಿಯ ಸಿ. ಕೃಷ್ಣಕುಮಾರ್ರನ್ನು ಸುಮಾರು 18,840 ಮತಗಳ ಅಂತರದಿಂದ ಸೋಲಿಸಿದ್ದಾರೆ.
‘‘ಈ ವಿಜಯದಿಂದ ನನಗೆ ಸಂತೋಷವಾಗಿದೆ. ಇದು ಎರಡೂ ಕೋಮುವಾದಿ ಸಂಘಟನೆಗಳಿಗೆ ಹಿನ್ನಡೆಯಾಗಿದೆ. ಒಂದು ನೇರವಾಗಿ ಕೋಮು ಸಂಘಟನೆಯಾಗಿದೆ ಹಾಗೂ ಇನ್ನೊಂದು ಕೋಮು ಸಂಘಟನೆಯು ಸಮತಾವಾದದ ಮುಖವಾಡವನ್ನು ಧರಿಸಿದೆ. ಅವೆರಡೂ ಒಂದೇ. ಇದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ ಮತ್ತು ಅದಕ್ಕೆ ಪ್ರತಿಕ್ರಿಯಿಸಿದ್ದಾರೆ’’ ಎಂದು ಅವರು ಹೇಳಿದರು.
►ವಯನಾಡ್ ಗೆ ಪ್ರಿಯಾಂಕಾ ಗಾಂಧಿ
ವಯನಾಡ್ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನ ಪ್ರಿಯಾಂಕಾ ಗಾಂಧಿ 4.1 ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದಾರೆ.
► ಪಂಜಾಬ್ | ಆಪ್ 3, ಕಾಂಗ್ರೆಸ್ 1 ಕ್ಷೇತ್ರದಲ್ಲಿ ಜಯ ; ಶೂನ್ಯ ಸಂಪಾದಿಸಿದ ಬಿಜೆಪಿ
ಪಂಜಾಬ್ ವಿಧಾನ ಸಭಾ ಉಪ ಚುನಾವಣೆಯ ಫಲಿತಾಂಶ ಶನಿವಾರ ಘೋಷಣೆಯಾಗಿದ್ದು, ಗಿಡ್ಡೇರ್ಬಾಹಾ, ದೇರಾ ಬಾಬಾ ನಾನಕ್ ಹಾಗೂ ಚಬ್ಬೇವಾಲ್ ಕ್ಷೇತ್ರಗಳು ಆಡಳಿತಾರೂಢ ಆಮ್ ಆದ್ಮಿ ಪಕ್ಷ (ಆಪ್)ದ ಪಾಲಾಗಿವೆ. ಬರ್ನಾಲಾ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಗಳಿಸಿದೆ.
ಈ ಕ್ಷೇತ್ರಗಳ ಹಾಲಿ ಶಾಸಕರು ಈ ವರ್ಷದ ಆರಂಭದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾಗಿದ್ದರು. ಇದರಿಂದ ತೆರವಾದ ಸ್ಥಾನಗಳಿಗೆ ನವೆಂಬರ್ 20ರಂದು ಚುನಾವಣೆ ನಡೆದಿತ್ತು.
ಕಾಂಗ್ರೆಸ್ನ ಭದ್ರಕೋಟೆಯಾದ ಗಿಡ್ಡೇರ್ಬಾಹಾ ಹಾಗೂ ದೇರಾ ಬಾಬಾ ನಾನಕ್ನಲ್ಲಿ ಜಯ ಗಳಿಸುವಲ್ಲಿ ಆಪ್ ಯಶಸ್ವಿಯಾಗಿದೆ. ಆದರೆ, ತಾನು ಪ್ರಾಬಲ್ಯ ಹೊಂದಿದ್ದ ಬರ್ನಾಲಾ ಕ್ಷೇತ್ರದಲ್ಲಿ ಪ್ರಧಾನ ಪ್ರತಿಪಕ್ಷದ ವಿರುದ್ಧ ಸೋತಿದೆ.
ಈ ಉಪ ಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ಶಿರೋಮಣಿ ಅಕಾಲಿ ದಳ ಈ ಉಪ ಚುನಾವಣೆಯಿಂದ ದೂರ ಉಳಿದಿದೆ.
ಈ ಉಪ ಚುನಾವಣೆಯಲ್ಲಿ ಜಯ ಗಳಿಸುವುದರೊಂದಿಗೆ 117 ಸದಸ್ಯರ ವಿಧಾನ ಸಭೆಯಲ್ಲಿ ಆಪ್ 94 ಸ್ಥಾನಗಳು ಹಾಗೂ ಕಾಂಗ್ರೆಸ್ 16 ಸ್ಥಾನಗಳನ್ನು ಪಡೆದುಕೊಂಡಿದೆ.
ಉಪ ಚುನಾವಣೆಯ ಫಲಿತಾಂಶ ಘೋಷಣೆಯಾದಂತೆ ಆಪ್ ನಾಯಕರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸಿಹಿ ಹಂಚಿದರು ಹಾಗೂ ಮೆರವಣಿಗೆ ನಡೆಸಿದರು.
ಉಪ ಚುನಾವಣೆಯಲ್ಲಿ ಪಕ್ಷ ಅಮೋಘ ಜಯ ಗಳಿಸಿರುವುದಕ್ಕಾಗಿ ಮುಖ್ಯಮಂತ್ರಿ ಭಗವಂತ ಮಾನ್ ಪಂಜಾಬ್ನ ಜನರನ್ನು ಅಭಿನಂದಿಸಿದ್ದಾರೆ.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್ ತನ್ನ ‘ಎಕ್ಸ್’ನ ಪೋಸ್ಟ್ನಲ್ಲಿ, ‘‘ಪಂಜಾಬ್ನ ಜನರು ಮತ್ತೊಮ್ಮೆ ಆಪ್ನ ಸಿದ್ಧಾಂತದ ಕುರಿತು ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ರಾಜ್ಯ ಸರಕಾರ ಕಾರ್ಯಗಳು ಈ ಉಪ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳ ಪೈಕಿ 3 ಸ್ಥಾನಗಳಲ್ಲಿ ಪಕ್ಷ ಜಯ ಗಳಿಸುವಂತೆ ಮಾಡಿತು’’ ಎಂದಿದ್ದಾರೆ.