ಸೆ. 5 ರಂದು ಉ.ಪ್ರ., ಜಾರ್ಖಂಡ್‌ನ ತಲಾ ಒಂದು ಅಸೆಂಬ್ಲಿ ಕ್ಷೇತ್ರಗಳಿಗೆ ಉಪಚುನಾವಣೆ
ಮೊದಲ ಬಾರಿಗೆ ಎನ್ಡಿಎ, ಇಂಡಿಯಾ ನೇರ ಹಣಾಹಣಿ
ಲಕ್ನೋ: ಉತ್ತರಪ್ರದೇಶ ಹಾಗೂ ಜಾರ್ಖಂಡ್ ತಲಾ ಒಂದು ವಿಧಾನಸಭಾ ಕ್ಷೇತ್ರಗಳಿಗೆ ಮಂಗಳವಾರ ನಡೆಯಲಿರುವ ಉಪಚುನಾವಣೆಯು ಮೊತ್ತಮೊದಲ ಬಾರಿಗೆ ಬಿಜೆಪಿ ಹಾಗೂ ಪ್ರತಿಪಕ್ಷಗಳ ನೂತನ ಇಂಡಿಯಾ ಮೈತ್ರಿಕೂಟದ ನಡುವೆ ನೇರಹಣಾಣಿಗೆ ಸಾಕ್ಷಿಯಾಗಲಿವೆ.
ಉತ್ತರಪ್ರದೇಶದ ಘೋಸಿ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಸ್ಪರ್ಧಿಸುತ್ತಿರುವ ಸಮಾಜವಾದಿ (ಎಸ್ಪಿ) ಪಕ್ಷದ ಅಭ್ಯರ್ಥಿಗೆ ಕಾಂಗ್ರೆಸ್ ಹಾಗೂ ಎಡಪಕ್ಷಗಳು ಬೆಂಬಲ ಘೋಷಿಸಿವೆ ಅವರ ಪರವಾಗಿ ಚುನಾವಣಾ ಪ್ರಚಾರದಲ್ಲಿಯೂ ಪಾಲ್ಗೊಂಡಿವೆ.
ಉತ್ತರಪ್ರದೇಶದಲ್ಲಿ ಪ್ರಬಲ ರಾಜಕೀಯ ಪಕ್ಷವಾಗಿರದಿದ್ದರೂ, ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ ಕೂಡಾ ಎಸ್ಪಿ ಅಭ್ಯರ್ಥಿಗೆ ಬೆಂಬಲವನ್ನು ಪ್ರಕಟಿಸಿದೆ. ಸಮಾಜವಾದಿ ಪಕ್ಷವು ಸುಧಾಕರ್ ಸಿಂಗ್ ಅವರನ್ನು ಕಣಕ್ಕಿಳಿಸಿದೆ. ಸುಧಾಕರ್ ಸಿಂಗ್ ಗೆ ಈಗಾಗಲೇ ಕಾಂಗ್ರೆಸ್, ಸಿಪಿಎಂ,ಸಿಪಿಐ (ಎಂಎಲ್)-ಲಿಬರೇಶನ್ ಪಕ್ಷಗಳು ಒಕ್ಕೊರಲ ಬೆಂಬಲವನ್ನು ಪ್ರಕಟಿಸಿವೆ.
ಬಿಜೆಪಿ ಅಭ್ಯರ್ಥಿ ದಾರಾಸಿಂಗ್ ಚೌಹಾಣ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಸ್ಪರ್ಧಿಸಿ, ಗೆಲುವು ಸಾಧಿಸಿದ್ದರು. ಆದರೆ ಅವರು ಬಿಜೆಪಿಗೆ ಸೇರ್ಪಡೆಗೊಳ್ಳಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪುನರಾಯ್ಕೆ ಕೋರಿ ಸ್ಪರ್ಧಿಸುತ್ತಿದ್ದಾರೆ.
ಜಾರ್ಖಂಡ್ನ ಡುಮ್ರಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ)ದ ಅಭ್ಯರ್ಥಿಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳು ಬೆಂಬಲವನ್ನು ಪ್ರಕಟಿಸಿವೆ.
ಜೆಎಂಎಂನ ಅಭ್ಯರ್ಥಿ ಬೇಬಿ ದೇವಿ ಹಾಗೂ ಎನ್‌ಡಿಎಯ ಯಶೋದಾದೇವಿ ನಡುವೆ ಜಿದ್ದಾಜಿದ್ದಿಯ ಸ್ಪರ್ಧೆ ಏರ್ಪಟ್ಟಿದೆ.
ಡುಮ್ರಿ ಉಪಚುನಾವಣೆಯ ಗೆಲುವಿನೊಂದಿಗೆ ಇಂಡಿಯಾ ಮೈತ್ರಿಕೂಟವು ತನ್ನ ವಿಜಯಯಾತ್ರೆಯನ್ನು ಆರಂಭಿಸಲಿದೆಯೆಂದು ಜೆಎಂಎಂ ಹೇಳಿಕೊಂಡಿದೆ. ಇದೇ ವೇಳೆ ಜೆಎಂಎಂನ ವಶದಲ್ಲಿದ್ದ ಈ ಕ್ಷೇತ್ರವನ್ನು ಕಿತ್ತುಕೊಳ್ಳುವ ವಿಶ್ವಾಸವನ್ನು ಎನ್‌ಡಿಎ ವ್ಯಕ್ತಪಡಿಸಿದೆ.
ಜೆಎಂಎಂ ಶಾಸಕ, ಮಾಜಿ ಶಿಕ್ಷಣ ಸಚಿವ ಜಗರ್ನಾಥ್ ಮಹಾತೋ ಅವರ ನಿಧನದಿಂದಾಗಿ ತೆರವಾದ ಡುಮ್ರಿ ಕ್ಷೇತ್ರಕ್ಕೆ ಉಪಚುನಾವಣೆ ನಡೆಯುತ್ತಿದೆ. ಈ ಕ್ಷೇತ್ರವನ್ನು ಮಹಾತೋ ಅವರು 2004ನೇ ಇಸವಿಯಿಂದಲೂ ಪ್ರತಿನಿಧಿಸುತ್ತಿದ್ದರು. ಈ ಉಪಚುನಾವಣೆಗೆ ಜೆಎಂಎಂ ಪಕ್ಷವು ಮಹಾತೋ ಅವರ ಪತ್ನಿ ಬೇಬಿ ದೇವಿ ಅವರನ್ನು ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.