ಸಿಎಎ ಒಂದು ಬಲೆ, ಜನರು ತಮ್ಮ ಹಕ್ಕು ಕಳೆದುಕೊಳ್ಳಲಿದ್ದಾರೆ: ಮಮತಾ ಬ್ಯಾನರ್ಜಿ
Photo: PTI
ಕೊಲ್ಕತ್ತಾ: ಸಿಎಎ ಹೊಸ ಕಾನೂನಿನ ಅಡಿಯಲ್ಲಿ ನೋಂದಣಿ ಮಾಡಿಕೊಳ್ಳುವುದರಿಂದ ತೃಣಮೂಲ ಕಾಂಗ್ರೆಸ್ ಸರ್ಕಾರದ ಪ್ರಮುಖ ಕಲ್ಯಾಣ ಯೋಜನೆಗಳ ಲಭ್ಯತೆಯ ಹಕ್ಕನ್ನು ಜನತೆ ಕಳೆದುಕೊಳ್ಳಲಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.
ಬಾಂಗ್ಲಾದೇಶದ ಗಡಿಯಲ್ಲಿರುವ ಉತ್ತರ ಬಂಗಾಳದ ಹಲವು ಕಡೆಗಳಲ್ಲಿ ಚುನಾವಣಾ ಪ್ರಚಾರ ಕೈಗೊಂಡ ಮಮತಾ, ಸಿಎಎ ವಿವಾದವನ್ನು ಮತ್ತೆ ಕೆದಕಿದ್ದಾರೆ. "ಸಿಎಎ ಅಡಿಯಲ್ಲಿ ನೀವು ನೋಂದಣಿ ಮಾಡಿಕೊಂಡ ಕ್ಷಣದಿಂದ ನಿಮ್ಮನ್ನು ಬಾಂಗ್ಲಾದೇಶದಿಂದ ಬಂದವರು ಎಂದು ಪರಿಗಣಿಸಲಾಗುತ್ತದೆ. ನೀವು ಮತ್ತೆ ನಿಮ್ಮ ಮತ ಚಲಾಯಿಸಲು ಸಾಧ್ಯವಾಗುವುದಿಲ್ಲ. ನೀವು ಇಲ್ಲಿ ನಾಗರಿಕರಾಗಿ ಇಲ್ಲಿನ ಎಲ್ಲ ಹಕ್ಕುಗಳನ್ನು ಕಳೆದುಕೊಳ್ಳುತ್ತೀರಿ" ಎಂದು ಕೂಚ್ ಬೆಹಾರ್ ನ ಮಾತಭಂಗಾದಲ್ಲಿ ನಡೆದ ಸಭೆಯಲ್ಲಿ ಹೇಳಿದರು.
ಬಂಗಾಳದಲ್ಲಿ ಸಿಎಎ ಅನುಷ್ಠಾನಗೊಳಿಸಲು ತಮ್ಮ ಸರ್ಕಾರ ಅವಕಾಶ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
"ಸಿಎಎ ತಲೆಯಾದರೆ, ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ (ಎನ್ ಆರ್ ಸಿ) ಬಾಲ. ಯಾರು ನಾಗರಿಕರು ಎನ್ನುವುದನ್ನು ಅರ್ಚಕರು ದೃಢೀಕರಿಸಬೇಕು ಎಂದು ಅವರು ಈಗ ಹೇಳುತ್ತಿದ್ದಾರೆ. ಆದರೆ ಅವರು ಯಾವ ಕಾನೂನಿನಡಿ ಹಾಗೆ ಮಾಡುತ್ತಾರೆ? ನೀವು ಅಸ್ಸಾಂನಲ್ಲಿ ನೋಡಿದ್ದೀರಿ. ನಿಮ್ಮನ್ನು ಬಂಧನ ಶಿಬಿರಗಳಿಗೆ ಕಳುಹಿಸಲಾಗಿದೆ. ಅರ್ಚಕರಿಗೆ ಅಷ್ಟು ಶಕ್ತಿ ಇದ್ದರೆ, ಅವರನ್ನು ಏಕೆ ಪ್ರಮಾಣಪತ್ರ ಸಶಕ್ತ ಸಮಿತಿಗೆ ಏಕೆ ಸೇರಿಸಿಲ್ಲ? ಎಂದು ಪ್ರಶ್ನಿಸಿದರು.