ಟಿಎಂಸಿ ವಿರುದ್ಧ ನಿಂದನಾತ್ಮಕ ಜಾಹೀರಾತು ಪ್ರಕಟಿಸುವುದಕ್ಕೆ ಬಿಜೆಪಿಗೆ ತಡೆಯಾಜ್ಞೆ ವಿಧಿಸಿದ ಕೊಲ್ಕತ್ತಾ ಹೈಕೋರ್ಟ್
ಕ್ರಮಕೈಗೊಳ್ಳದ ಚುನಾವಣಾ ಆಯೋಗಕ್ಕೆ ತರಾಟೆ
ಕೊಲ್ಕತ್ತಾ ಹೈಕೋರ್ಟ್ | PC : PTI
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ವಿರುದ್ಧ ಯಾವುದೇ ರೀತಿಯ ನಿಂದನಾತ್ಮಕ ಜಾಹೀರಾತುಗಳನ್ನು ಮುಂದಿನ ಆದೇಶದ ತನಕ ಪ್ರದರ್ಶಿಸುವುದರಿಂದ ಬಿಜೆಪಿಗೆ ಕೊಲ್ಕತ್ತಾ ಹೈಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ರಾಜ್ಯದ ಆಡಳಿತ ಟಿಎಂಸಿಯನ್ನು ಗುರಿಯಾಗಿಸಿ ಬಿಜೆಪಿ ಪ್ರಕಟಿಸಿರುವ ಜಾಹೀರಾತುಗಳ ವಿರುದ್ಧ ದೂರುಗಳ ಕುರಿತಂತೆ ಕ್ರಮಕೈಗೊಳ್ಳಲು ವಿಫಲವಾದ ಭಾರತದ ಚುನಾವಣಾ ಆಯೋಗವನ್ನೂ ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ತರಾಟೆಗೆ ತೆಗೆದುಕೊಂಡಿದ್ದಾರೆ.
"ಬಿಜೆಪಿಯು ಪ್ರಚಾರ ಅಂತ್ಯಗೊಂಡ ನಂತರ, ಅಂದರೆ ಚುನಾವಣೆಗೆ ಮುಂಚಿನ ದಿನ ಹಾಗೂ ಚುನಾವಣಾ ದಿನದಂದು” ಪ್ರಕಟಿಸಿರುವ ಜಾಹೀರಾತುಗಳು ಮಾದರಿ ನೀತಿ ಸಂಹಿತೆಯ ವಿರುದ್ಧವಾಗಿದೆ ಹಾಗೂ ಟಿಎಂಸಿಯ ಹಕ್ಕುಗಳು ಹಾಗೂ ನ್ಯಾಯೋಚಿತ ಚುನಾವಣೆ ಹೊಂದುವ ನಾಗರಿಕರ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
“ಟಿಎಂಸಿ ವಿರುದ್ಧ ಮಾಡಲಾದ ಆರೋಪಗಳು ಖಂಡಿತವಾಗಿಯೂ ನಿಂದನಾತ್ಮಕವಾಗಿವೆ ಹಾಗೂ ಎದುರಾಳಿಗಳ ವಿರುದ್ಧ ವೈಯಕ್ತಿಕ ದಾಳಿಗಳನ್ನು ನಡೆಸಿ ಅವರನ್ನು ಅವಮಾನಿಸುವ ಉದ್ದೇಶ ಹೊಂದಿವೆ, ಆದ್ದರಿಂದ ಅಂತಹ ಜಾಹೀರಾತುಗಳನ್ನು ಪ್ರಕಟಿಸದಂತೆ ತಡೆಯಾಜ್ಞೆ ವಿಧಿಸಲಾಗಿದೆ,” ಎಂದು ನ್ಯಾಯಾಲಯ ಹೇಳಿದೆ.