ವಿಮಾನಗಳಿಗೆ ಬಾಂಬ್ ಬೆದರಿಕೆ | ಆರೋಪಿ ಜಗದೀಶ್ ಪೊಲೀಸರಿಗೆ ಶರಣು
PC : PTI
ಹೊಸದಿಲ್ಲಿ : ದೇಶಾದ್ಯಂತದ ವಿಮಾನಗಳು ಮತ್ತು ರೈಲ್ವೇ ನಿಲ್ದಾಣಗಳಿಗೆ ಸರಣಿ ಬಾಂಬ್ ಬೆದರಿಕೆಯನ್ನು ಹಾಕಿದ್ದ ಆರೋಪಿ ಜಗದೀಶ್ ಶ್ರೀಯಾಮ್ ಉಕೆಯ್ ನಾಗ್ಪುರ ಪೊಲೀಸರ ಮುಂದೆ ಶರಣಾಗಿದ್ದು, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಬಂಧಿತ ಜಗದೀಶ್ ಶ್ರೀಯಾಮ್ ಉಕೆಯ್ ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯ ಅರ್ಜುನಿ ಮೋರ್ಗಾಂವ್ ನಿವಾಸಿಯಾಗಿದ್ದಾನೆ. ಈತ ಭಯೋತ್ಪಾದನೆಯ ಕುರಿತ ಪುಸ್ತಕವನ್ನು ಕೂಡ ಬರೆದಿದ್ದಾನೆ. ಜಗದೀಶ್ ದಿಲ್ಲಿಯಿಂದ ಕಾರ್ಯಾಚರಣೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ನಗರದ ಪೊಲೀಸರು ಶಂಕಿತ ಜಗದೀಶ್ ಗೆ ತನಿಖೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಿದ್ದರು. ವಿಮಾನದ ಮೂಲಕ ನಾಗ್ಪುರಕ್ಕೆ ಬಂದು ಈತ ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈತ ಅ.21ರಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಮತ್ತು ರೈಲ್ವೆ ಪೊಲೀಸ್ ಅಧಿಕಾರಿಗಳಿಗೆ ಈಮೇಲ್ ಮೂಲಕ ಬೆದರಿಕೆಯನ್ನು ಕಳುಹಿಸಿದ್ದ. ಇದರಿಂದಾಗಿ ರೈಲ್ವೆ ನಿಲ್ದಾಣಗಳ ಭದ್ರತೆಯನ್ನು ಹೆಚ್ಚಿಸಲಾಗಿತ್ತು.
ಡಿಸಿಪಿ ಶ್ವೇತಾ ಖೇಡ್ಕರ್ ನೇತೃತ್ವದ ತನಿಖಾಧಿಕಾರಿಗಳು, ವಿವಿಧ ಸಂಸ್ಥೆಗಳಿಗೆ ಕಳುಹಿಸಿದ್ದ ಈಮೇಲ್ ಗಳನ್ನು ಆಧರಿಸಿ ಆರೋಪಿಯನ್ನು ಪತ್ತೆ ಹಚ್ಚಿದ್ದರು.