ಭಾರತದ ಯಾವುದೇ ಭಾಗವನ್ನು ʼಪಾಕಿಸ್ತಾನʼ ಎಂದು ಕರೆಯುವಂತಿಲ್ಲ: ಸುಪ್ರೀಂ ಕೋರ್ಟ್
ಹೈಕೋರ್ಟ್ ನ್ಯಾಯಮೂರ್ತಿ ಹೇಳಿಕೆ ವಿವಾದ
ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ (Photo:NDTV)
ಹೊಸದಿಲ್ಲಿ: ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ನ್ಯಾಯಾಲಯದ ಕಲಾಪದಲ್ಲಿ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ ನಂತರ ಅವರ ವಿರುದ್ಧದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಇಂದು ಮುಕ್ತಾಯಗೊಳಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು, ಭಾರತದ ಯಾವುದೇ ಭಾಗವನ್ನು ಪಾಕಿಸ್ತಾನ ಎಂದು ಕರೆಯುವಂತಿಲ್ಲ. ಇದು ಮೂಲಭೂತವಾಗಿ ರಾಷ್ಟ್ರದ ಪ್ರಾದೇಶಿಕ ಸಮಗ್ರತೆಗೆ ವಿರುದ್ಧವಾಗಿದೆ ಎಂದು ಹೇಳಿದೆ.
ನ್ಯಾಯಮೂರ್ತಿ ವಿ ಶ್ರೀಶಾನಂದ ಅವರ ಕಲಾಪದ ಎರಡು ವೀಡಿಯೊ ತುಣುಕುಗಳು ವೈರಲ್ ಆಗಿತ್ತು. ಸೆಪ್ಟೆಂಬರ್ 19 ರಂದು ವೈರಲ್ ಆದ ವೀಡಿಯೊದಲ್ಲಿ, ಆಗಸ್ಟ್ 28 ರಂದು ನ್ಯಾಯಮೂರ್ತಿ ಶ್ರೀಶಾನಂದ ಅವರು ನಡೆಸಿದ ಕಲಾಪದ ವೇಳೆ ಬೆಂಗಳೂರು ಪಶ್ಚಿಮದಲ್ಲಿ ಮುಸ್ಲಿಂ ಪ್ರಾಬಲ್ಯವಿರುವ ಗೋರಿಪಾಳ್ಯವನ್ನು 'ಪಾಕಿಸ್ತಾನ' ಎಂದು ಉಲ್ಲೇಖಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಅದಾದ ಬಳಿಕ ವೈರಲ್ ಆದ ಇನ್ನೊಂದು ವೀಡಿಯೊದಲ್ಲಿ ಮಹಿಳಾ ವಕೀಲರೊಬ್ಬರಿಗೆ ನ್ಯಾಯಮೂರ್ತಿಗಳು ಬಳಸಿದ ಪದದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು.