ಕಾವೇರಿ ನೀರು | ಕರ್ನಾಟಕದ ಮೇಲೆ ಒತ್ತಡ ಹೇರಲು ಕೇಂದ್ರಕ್ಕೆ ನಿಯೋಗ: ತಮಿಳುನಾಡು ನಿರ್ಧಾರ
Photo: PTI
ಚೆನ್ನೈ: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆಗೊಳಿಸಲು ಕೇಂದ್ರ ಸರಕಾರ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿ ತಮಿಳುನಾಡಿನ ಜಲಸಂಪನ್ಮೂಲ ಸಚಿವ ದೊರೈ ಮುರುಗನ್ ನೇತೃತ್ವದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳ ಸಂಸತ್ ಸದಸ್ಯರ ನಿಯೋಗವು ಕೇಂದ್ರ ಜಲಶಕ್ತಿ ಸಚಿವ ಸಚಿವ ಗಜೇಂದ್ರ ಸಿಂಗ್ ಅವರಿಗೆ ಶೀಘ್ರದಲ್ಲೇ ಮನವಿ ಪತ್ರವೊಂದನ್ನು ಸಲ್ಲಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 12,500 ಕ್ಯೂಸೆಕ್ ನೀರನ್ನು ಬಿಡುಗಡೆಗೊಳಿಸಲು ಕರ್ನಾಟಕಕ್ಕೆ ಸೂಚನೆ ನೀಡುವಂತೆ ಕಾವೇರಿ ಜಲ ನಿರ್ವಹಣಾ ಪ್ರಾಧಿಕಾರಕ್ಕೆ ನಿರ್ದೇಶಿಸಬೇಕೆಂದು ಕೇಂದ್ರ ಜಲಶಕ್ತಿ ಸಚಿವರಿಗೆ ಮನವಿ ಮಾಡುವುದು ನಿಯೋಗದ ಪ್ರಾಥಮಿಕ ಉದ್ದೇಶವಾಗಿದೆ.
ಈ ಮಧ್ಯೆ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ತಮಿಳುನಾಡಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲು ಕರ್ನಾಟಕವು ದುರ್ಬಲ ಮುಗಾರು ಮಳೆ ಹಾಗೂ ಕಾವೇರಿ ಜಲಾನಯನ ಪ್ರದೇಶದಲ್ಲಿನ ಅಂತರ್ಜಲ ಮಟ್ಟದ ಕುರಿತು ‘ ಅಸತ್ಯದ ಕಾರಣಗಳನ್ನು’ ನೀಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಕರ್ನಾಟಕವು ತಮಿಳುನಾಡಿಗೆ ಸೆಪ್ಟೆಂಬರ್ 14ರವರೆಗೆ 103.5 ಟಿಎಂಸಿ ನೀರನ್ನು ಬಿಡುಗಡೆಗೊಳಿಸಬೇಕಾಗಿತ್ತು. ಆದರೆ ಕರ್ನಾಟಕವು ಕೇವಲ 38.4 ಟಿಎಂಸಿ ನೀರನ್ನು ಮಾತ್ರವೇ ಬಿಡುಗಡೆಗೊಳಿಸಿದ್ದು, ಇದರಿಂದ ರಾಜ್ಯಕ್ಕೆ 65.1ಟಿಎಂಸಿ ನೀರಿನ ಗಣನೀಯ ಕೊರತೆ ಉಂಟಾಗಿದೆ ಎಂದು ಮುಖ್ಯಮಂತ್ರಿ ಸ್ಟಾಲಿನ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.