ಚುನಾವಣೆಗೆ ಸಿದ್ಧವಾದ ʼಮಹಾಯುತಿ ಮೈತ್ರಿಕೂಟʼ | ಪ್ರಫುಲ್ ಪಟೇಲ್ ಭಾಗಿಯಾಗಿದ್ದ ಭ್ರಷ್ಟಾಚಾರ ಪ್ರಕರಣವನ್ನು ಮುಕ್ತಾಯಗೊಳಿಸಿದ ಸಿಬಿಐ
ಪ್ರಫುಲ್ ಪಟೇಲ್ | Photo: Facebook/Praful Patel
ಹೊಸದಿಲ್ಲಿ: 2017ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷ(ಅಜಿತ್ ಪವಾರ್ ಬಣ)ದ ನಾಯಕ ಪ್ರಫುಲ್ ಪಟೇಲ್ ವಿರುದ್ಧ ದಾಖಲಾಗಿದ್ದ ಭ್ರಷ್ಟಾಚಾರ ಪ್ರಕರಣವನ್ನು ಕೇಂದ್ರ ತನಿಖಾ ದಳವು ಮುಕ್ತಾಯಗೊಳಿಸಿದೆ.
ಏರ್ ಇಂಡಿಯಾ ವಿಮಾನಗಳನ್ನು ಗುತ್ತಿಗೆ ನೀಡುವ ವಿಚಾರದಲ್ಲಿ ಅಕ್ರಮಗಳು ನಡೆದಿವೆ ಎಂಬ ಆರೋಪದಡಿಯಲ್ಲಿ ನಾಗರಿಕ ವಿಮಾನ ಯಾನ ಸಚಿವಾಲಯ ಹಾಗೂ ಏರ್ ಇಂಡಿಯಾದ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮೇ 2017ರಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ತನಿಖಾ ದಳಕ್ಕೆ ಆದೇಶಿಸಿತ್ತು.
ಸುಮಾರು ಏಳು ವರ್ಷಗಳ ಕಾಲ ತನಿಖೆ ನಡೆಸಿದ ಕೇಂದ್ರ ತನಿಖಾ ದಳವು ಪ್ರಫುಲ್ ಪಟೇಲ್ ಹಾಗೂ ಆಗಿನ ನಾಗರಿಕ ವಿಮಾನ ಯಾನ ಸಚಿವಾಲಯ ಹಾಗೂ ಏರ್ ಇಂಡಿಯಾದ ಅಧಿಕಾರಿಗಳಿಗೆ ಕ್ಲೀನ್ ಚಿಟ್ ನೀಡಿದೆ ಎಂದು ಮೂಲಗಳು ತಿಳಿಸಿವೆ. ಪ್ರಕರಣದ ಮುಕ್ತಾಯದ ವರದಿಯನ್ನು ಸಂಬಂಧಿತ ನ್ಯಾಯಾಲಯದೆದುರು ಮಾರ್ಚ್ 2024ರಂದು ಸಲ್ಲಿಸಲಾಗಿದೆ.
ಈ ಹಿಂದೆ ನಾಗರಿಕ ವಿಮಾನ ಯಾನ ಸಚಿವರಾಗಿದ್ದ ಪ್ರಫುಲ್ ಪಟೇಲ್ ತಮ್ಮ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು, ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಕಾರಿಗಳು, ಏರ್ ಇಂಡಿಯಾ ಹಾಗೂ ಖಾಸಗಿ ವ್ಯಕ್ತಿಗಳೊಂದಿಗೆ ಪಿತೂರಿ ನಡೆಸಿ, ಸಾರ್ವಜನಿಕ ವಿಮಾನ ಯಾನ ಸಂಸ್ಥೆಯಾಗಿದ್ದ ಏರ್ ಇಂಡಿಯಾಗೆ ದೊಡ್ಡ ಪ್ರಮಾಣದ ವಿಮಾನಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸಿದ್ದರು ಎಂದು ಆರೋಪಿಸಲಾಗಿತ್ತು.
ಏರ್ ಇಂಡಿಯಾದಲ್ಲಿ ವಿಮಾನ ಖರೀದಿ ಪ್ರಕ್ರಿಯೆ ಜಾರಿಯಲ್ಲಿದ್ದರೂ, ವಿಮಾನಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸಲಾಗಿತ್ತು ಎಂದೂ ಆರೋಪಿಸಲಾಗಿತ್ತು.
ಏರ್ ಇಂಡಿಯಾ ಹಾಗೂ ಇಂಡಿಯಾ ಏರ್ ಲೈನ್ಸ್ ಅನ್ನು ವಿಲೀನಗೊಳಿಸಿದ ನಂತರ, ಸಾರ್ವಜನಿಕ ಉದ್ಯಮವಾದ ಭಾರತೀಯ ರಾಷ್ಟ್ರೀಯ ವಿಮಾನ ಯಾನ ನಿಗಮ ನಿಯಮಿತವನ್ನು ಸ್ಥಾಪಿಸಲಾಗಿತ್ತು.
ಈ ಸಂಬಂಧ 2017ರಲ್ಲಿFIR ದಾಖಲಿಸಿಕೊಂಡಿದ್ದ ಕೇಂದ್ರ ತನಿಖಾ ದಳವು, “ಭಾರಿ ಪ್ರಮಾಣದ ವಿಮಾನಗಳ ಖರೀದಿ ಹಾಗೂ ಹಲವು ವಿಮಾನಗಳು, ವಿಶೇಷವಾಗಿ ಸಾಗರೋತ್ತರ ವಿಮಾನಗಳು ಭಾರಿ ನಷ್ಟದೊಂದಿಗೆ ಬಹುತೇಕ ಖಾಲಿ ಸಂಚರಿಸುತ್ತಿದ್ದರೂ, ನಾಗರಿಕ ವಿಮಾನ ಯಾನ ಸಚಿವಾಲಯ ಮತ್ತು ಭಾರತೀಯ ರಾಷ್ಟ್ರೀಯ ವಿಮಾನ ಯಾನ ನಿಗಮ ನಿಯಮಿತದ ಅಧಿಕಾರಿಗಳು ಏರ್ ಇಂಡಿಯಾಗೆ ಗುತ್ತಿಗೆ ಆಧಾರದಲ್ಲಿ ವಿಮಾನಗಳನ್ನು ಖರೀದಿಸಿದ್ದರು” ಎಂದು ಆರೋಪಿಸಿತ್ತು.
ತನಿಖೆಯ ಸಂದರ್ಭದಲ್ಲಿ, “ಗುತ್ತಿಗೆ ಆಧಾರದಲ್ಲಿ ವಿಮಾನಗಳನ್ನು ಖರೀದಿಸುವಾಗ, ಮುಂಚಿತವಾಗಿಯೇ ರದ್ದುಗೊಳಿಸಬಹುದಾದ ಷರತ್ತನ್ನು ಕರಾರಿನಲ್ಲಿ ಅಳವಡಿಸಿಕೊಳ್ಳದೆ ಇದ್ದುದರಿಂದ ಭಾರತೀಯ ರಾಷ್ಟ್ರೀಯ ವಿಮಾನ ಯಾನ ನಿಗಮ ನಿಯಮಿತವು ಕರಾರನ್ನು ರದ್ದುಗೊಳಿಸಲು ಸಾಧ್ಯವಾಗಿಲ್ಲ. ಇದರಿಂದ ಭಾರತೀಯ ರಾಷ್ಟ್ರೀಯ ವಿಮಾನ ಯಾನ ನಿಗಮ ನಿಯಮಿತವು ಎಲ್ಲ ವೆಚ್ಚಗಳು ಹಾಗೂ ಗುತ್ತಿಗೆ ವ್ಯತ್ಯಾಸ ಮೊತ್ತವನ್ನು ಪಾವತಿಸುವಂತಾಗಿರಬಹುದು” ಎಂದೂ ಬಹಿರಂಗಪಡಿಸಿತ್ತು.
ಏರ್ ಇಂಡಿಯಾಗೆ ನೂತನ ವಿಮಾನಗಳು ಪೂರೈಕೆಯಾದರೂ ಗುತ್ತಿಗೆ ಒಪ್ಪಂದವನ್ನು ಮುಂದುವರಿಸಿದ ಹಾಗೂ ಗುತ್ತಿಗೆ ಒಪ್ಪಂದಗಳನ್ನು ನವೀಕರಿಸಿದ ನಾಗರಿಕ ವಿಮಾನ ಯಾನ ಸಚಿವಾಲಯದ ಅಧಿಕಾರಿಗಳನ್ನು ಜನವರಿ 21, 2010ರಂದು ಸಾರಿಗೆ, ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಂಸದೀಯ ಸಮಿತಿ ವರದಿಯಲ್ಲಿ ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳಲಾಗಿತ್ತು. ಇದರೊಂದಿಗೆ ಮಾರ್ಚ್ 12, 2010ರ ಸಾರ್ವಜನಿಕ ಉದ್ಯಮಗಳ ಸಮಿತಿಯ ವರದಿಯೂ ಈ ನಡೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು.
“ಪೈಲಟ್ ಗಳ ಸಿದ್ಧತೆಯಿಲ್ಲದಿದ್ದರೂ ಏರ್ ಇಂಡಿಯಾಗೆ 15 ದುಬಾರಿ ವಿಮಾನಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸಲಾಗಿತ್ತು. ಇದರಿಂದ ಸಂಸ್ಥೆಗೆ ದೊಡ್ಡ ಪ್ರಮಾಣದ ನಷ್ಟವುಂಟಾಗಿದೆ” ಎಂಬ ಆಘಾತಕಾರಿ ಸಂಗತಿಯನ್ನೂ ತನಿಖೆಯು ಬಹಿರಂಗ ಪಡಿಸಿತ್ತು.
ಏರ್ ಇಂಡಿಯಾ 2007ರ ನಂತರ ತನ್ನದೇ ಸ್ವಂತ ಬೋಯಿಂಗ್ 777 ವಿಮಾನವನ್ನು ಪಡೆಯುವುದಿದ್ದರೂ, ಖಾಸಗಿ ವ್ಯಕ್ತಿಗಳಿಗೆ ಲಾಭ ಮಾಡಿಕೊಡಲು ಏರ್ ಇಂಡಿಯಾವು 2006ರಲ್ಲಿ ಐದು ವರ್ಷಗಳ ಅವಧಿಗೆ ನಾಲ್ಕು ಬೋಯಿಂಗ್ 777 ವಿಮಾನಗಳನ್ನು ಗುತ್ತಿಗೆ ಆಧಾರದಲ್ಲಿ ಖರೀದಿಸಿತ್ತು. ಇದರ ಫಲಿತಾಂಶವಾಗಿ, ಐದು ಬೋಯಿಂಗ್ 777 ವಿಮಾನಗಳು ಹಾಗೂ ಐದು ಬೋಯಿಂಗ್ 737 ವಿಮಾನಗಳನ್ನು ನಿಲ್ದಾಣದಲ್ಲೇ ನಿಷ್ಕ್ರಿಯವಾಗಿ ನಿಲ್ಲಿಸಬೇಕಾಗಿ ಬಂದಿತ್ತು. ಇದರಿಂದ 2007-09ರ ನಡುವೆ ಅಂದಾಜು 840 ಕೋಟಿ ರೂ. ನಷ್ಟವುಂಟಾಗಿದೆ ಎಂದೂ ತನ್ನ ಪ್ರಾಥಮಿಕ ಮಾಹಿತಿ ವರದಿಯಲ್ಲಿ ಕೇಂದ್ರ ತನಿಖಾ ದಳವು ಆರೋಪಿಸಿತ್ತು.
ಸೌಜನ್ಯ: thewire.in