ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ನಿವಾಸದ ಮೇಲೆ ಸಿಬಿಐ ದಾಳಿ
ಹೊಸದಿಲ್ಲಿ: ಕಿರು ಜಲ ವಿದ್ಯುತ್ ಯೋಜನೆ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ನಿವಾಸಗಳು ಹಾಗೂ ಇನ್ನಿತರ 29 ಸ್ಥಳಗಳಲ್ಲಿ ಗುರುವಾರ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 100 ಅಧಿಕಾರಿಗಳನ್ನೊಳಗೊಂಡ ತಂಡವು ಗುರುವಾರ ಬೆಳಗ್ಗೆ ವಿವಿಧ ನಗರಗಳಲ್ಲಿನ 30 ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಪ್ರಕರಣವು ರೂ. 2,200 ಕೋಟಿ ಮೌಲ್ಯದ ಕಿರು ಜಲ ವಿದ್ಯುತ್ ಯೋಜನೆಯ ಕಾಮಗಾರಿಗಳ ಗುತ್ತಿಗೆ ನೀಡುವಾಗ ಭ್ರಷ್ಟಾಷಾರ ನಡೆದಿದೆ ಎಂಬ ಆರೋಪ ಕುರಿತದ್ದಾಗಿದೆ.
ಆಗಸ್ಟ್ 23, 2018ರಿಂದ ಅಕ್ಟೋಬರ್ 30, 2019ರವರೆಗೆ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ ಸತ್ಯಪಾಲ್ ಮಲಿಕ್, ಈ ಯೋಜನೆಯ ಕಡತ ಸೇರಿದಂತೆ ಒಟ್ಟು ಎರಡು ಕಡತಗಳನ್ನು ವಿಲೇವಾರಿ ಮಾಡಲು ನನಗೆ ರೂ. 300 ಕೋಟಿ ಲಂಚದ ಆಮಿಷವೊಡ್ಡಲಾಗಿತ್ತು ಎಂದು ಆರೋಪಿಸಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಸಿಬಿಐ, "2019ರಲ್ಲಿ ಖಾಸಗಿ ಕಂಪನಿಯೊಂದಕ್ಕೆ ರೂ. 2,200 ಕೋಟಿ ಮೌಲ್ಯದ ಕಿರು ಜಲ ವಿದ್ಯುತ್ ಯೋಜನೆಯ ಗುತ್ತಿಗೆಯನ್ನು ನೀಡುವಾಗ ಅಕ್ರಮ ನಡೆದಿದೆ ಎಂಬ ಆರೋಪಗಳನ್ನು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ" ಎಂದು ಹೇಳಿದೆ.
ಚೆನಾಬ್ ವ್ಯಾಲಿ ಪವರ್ ಪ್ರಾಜೆಕ್ಟ್ಸ್ ಪ್ರೈ. ಲಿ.ನ ಮಾಜಿ ಅಧ್ಯಕ್ಷ ನವೀನ್ ಕುಮಾರ್ ಚೌಧರಿಯವರೊಂದಿಗೆ ಮಾಜಿ ಅಧಿಕಾರಿಗಳಾದ ಎಂ.ಎಸ್.ಬಾಬು, ಎಂ.ಕೆ.ಮಿತ್ತಲ್, ಅರುಣ್ ಕುಮಾರ್ ಮಿಶ್ರಾ ಹಾಗೂ ಪಟೇಲ್ ಎಂಜಿನಿಯರಿಂಗ್ ಲಿಮಿಟೆಡ್ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.