ಸರ್ಕಾರಿ ನೌಕರರಿಗೆ ಹೊಸ ಯೋಜನೆ ಘೋಷಿಸಿದ ಕೇಂದ್ರ ಸರಕಾರ: ಏನಿದು ಏಕೀಕೃತ ಪಿಂಚಣಿ ಯೋಜನೆ?
ಯೋಜನೆಯ ಲಾಭ ಪಡೆಯಲಿರುವ 23 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳು
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ನೂತನ ಪಿಂಚಣಿ ಯೋಜನೆ (ಎನ್ಪಿಎಸ್) ಕುರಿತು ಹಲವಾರು ಬಿಜೆಪಿಯೇತರ ಆಡಳಿತದ ರಾಜ್ಯಗಳ ಪ್ರತಿಭಟನೆಗಳ ನಡುವೆಯೇ ಕೇಂದ್ರ ಸರಕಾರವು ಶನಿವಾರ ಏಕೀಕೃತ ಪಿಂಚಣಿ ಯೋಜನೆ (ಯುಪಿಎಸ್)ಗೆ ಚಾಲನೆ ನೀಡಿದೆ. ಜಮ್ಮು-ಕಾಶ್ಮೀರ ಮತ್ತು ಹರ್ಯಾಣ ಸೇರಿದಂತೆ ಎರಡು ವಿಧಾನಸಭೆ ಚುನಾವಣೆಗಳು ಸನ್ನಿಹಿತಗೊಂಡಿರುವ ಹಿನ್ನೆಲೆಯಲ್ಲಿ ಕೇಂದ್ರದ ಈ ಕ್ರಮ ಮಹತ್ವ ಪಡೆದುಕೊಂಡಿದೆ.
ಯುಪಿಎಸ್ನಿಂದ 23 ಲಕ್ಷ ಕೇಂದ್ರ ಸರಕಾರಿ ಉದ್ಯೋಗಿಗಳಿಗೆ ಲಾಭವಾಗಲಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ ಪ್ರಕಟಿಸಿದರು. ನೂತನ ಯೋಜನೆಯು 2025,ಎ.1ರಿಂದ ಜಾರಿಗೊಳ್ಳಲಿದ್ದು,ಉದ್ಯೋಗಿಗಳು ಎನ್ಪಿಎಸ್ ಅಥವಾ ಯುಪಿಎಸ್ ಅನ್ನು ಆಯ್ಕೆ ಮಾಡಿಕೊಳ್ಳಬಹುದು.
ಪ್ರಧಾನಿ ನರೇಂದ್ರ ಮೋದಿಯವರ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯು ಯುಪಿಎಸ್ಗೆ ಹಸಿರು ನಿಶಾನೆಯನ್ನು ತೋರಿಸಿದೆ. ಯುಪಿಎಸ್ ಸರಕಾರಿ ನೌಕರರಿಗೆ ಖಚಿತ ಪಿಂಚಣಿ,ಕುಟುಂಬ ಪಿಂಚಣಿ ಮತ್ತು ಖಚಿತ ಕನಿಷ್ಠ ಪಿಂಚಣಿಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
1. ಖಚಿತ ಪಿಂಚಣಿ: ಕನಿಷ್ಠ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಸರಕಾರಿ ನೌಕರರರಿಗೆ ನಿವೃತ್ತಿಗೆ ಮೊದಲಿನ 12 ತಿಂಗಳುಗಳ ಸರಾಸರಿ ಮೂಲವೇತನದ ಶೇ.50ರಷ್ಟು ಪಿಂಚಣಿಯನ್ನು ಯೋಜನೆಯು ಖಾತರಿ ಪಡಿಸುತ್ತದೆ.
2. ಕುಟುಂಬ ಪಿಂಚಣಿ: ಪಿಂಚಣಿದಾರರು ಮೃತಪಟ್ಟರೆ ಅವರ ಕುಟುಂಬವು ಸಾವಿನ ಸಮಯದಲ್ಲಿ ಸ್ವೀಕರಿಸುತ್ತಿದ್ದ ಪಿಂಚಣಿಯ ಶೇ.60ರಷ್ಟನ್ನು ಪಡೆಯುತ್ತದೆ.
3. ಕನಿಷ್ಠ ಪಿಂಚಣಿ: ಯೋಜನೆಯು ಸರಕಾರಿ ನೌಕರರು ಕನಿಷ್ಠ 10 ವರ್ಷಗಳ ಸೇವೆಯ ಬಳಿಕ ನಿವೃತ್ತಿಗೊಂಡರೆ ಮಾಸಿಕ ಕನಿಷ್ಠ 10,000 ರೂ.ಗಳ ಪಿಂಚಣಿಯ ಭರವಸೆ ನೀಡುತ್ತದೆ.
ಪ್ರಸ್ತುತ ಪಿಂಚಣಿ ಯೋಜನೆಯ ಪ್ರಕಾರ ನೌಕರರು ಶೇ.10 ವಂತಿಗೆ ನೀಡುತ್ತಿದ್ದರೆ ಕೇಂದ್ರ ಸರಕಾರದ ಪಾಲು ಶೇ.14ರಷ್ಟಿದೆ. ಯುಪಿಎಸ್ನೊಂದಿಗೆ ಕೇಂದ್ರದ ವಂತಿಗೆ ಶೇ.18ಕ್ಕೆ ಹೆಚ್ಚಲಿದೆ.
ಸರಕಾರಿ ನೌಕರರಿಗೆ ಪಿಂಚಣಿ ಯೋಜನೆಯನ್ನು ಪುನರ್ಪರಿಶೀಲಿಸಲು ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯ ಅಸ್ತಿತ್ವದಲ್ಲಿರುವ ಮಾರ್ಗಸೂಚಿ ಮತ್ತು ಸ್ವರೂಪದ ಹಿನ್ನೆಲೆಯಲ್ಲಿ ಬದಲಾವಣೆಗಳನ್ನು ಸೂಚಿಸಲು ಕಳೆದ ವರ್ಷ ವಿತ್ತ ಕಾರ್ಯದರ್ಶಿ ಟಿ.ವಿ.ಸೋಮನಾಥನ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು.
ಬಿಜೆಪಿಯೇತರ ಆಡಳಿತದ ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆ(ಒಪಿಎಸ್)ಗೆ ಮರಳಲು ನಿರ್ಧರಿಸಿದ ಬಳಿಕ ಮತ್ತು ಉದ್ಯೋಗಿಗಳ ಸಂಘಟನೆಯೂ ಅದಕ್ಕೇ ಆಗ್ರಹಿಸಿದ ಹಿನ್ನೆಲೆಯಲ್ಲಿ ವಿತ್ತ ಸಚಿವಾಲಯವು ಈ ಸಮಿತಿಯನ್ನು ರಚಿಸಿತ್ತು.
ಒಪಿಎಸ್ನಡಿ ನಿವೃತ್ತ ಸರಕಾರಿ ನೌಕರರು ತಾವು ಕೊನೆಯ ಬಾರಿ ಪಡೆದಿದ್ದ ಮಾಸಿಕ ವೇತನದ ಶೇ.50ರಷ್ಟನ್ನು ಮಾಸಿಕ ಪಿಂಚಣಿಯನ್ನಾಗಿ ಪಡೆಯುತ್ತಾರೆ. ಈ ಮೊತ್ತವು ತುಟ್ಟಿಭತ್ಯೆ ದರಗಳ ಹೆಚ್ಚಳದೊಂದಿಗೆ ಏರಿಕೆಯಾಗುತ್ತಲೇ ಇರುತ್ತದೆ.