ಕಸದಿಂದ ರಸ : ಮೂರು ವರ್ಷಗಳ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ 2,364 ಕೋಟಿ ರೂ. ಗಳಿಸಿದ ಕೇಂದ್ರ!
PC :PTI
ಹೊಸದಿಲ್ಲಿ: ಕಸದಿಂದ ರಸ ಎಂಬುದು ನಾಣ್ಣುಡಿ. ಇದನ್ನು ಅಕ್ಷರಶಃ ಜಾರಿಗೆ ತಂದಿರುವುದು ಕೇಂದ್ರ ಸರಕಾರ ಜಾರಿಗೊಳಿಸಿದ್ದ ಸ್ವಚ್ಛತೆಯ ಅಭಿಯಾನವಾದ ‘ವಿಶೇಷ ಅಭಿಯಾನ 4.0’. ಈ ಅಭಿಯಾನದಡಿ ಕೇಂದ್ರ ಸರಕಾರವು 2021ರಿಂದ ಬಾಕಿಯುಳಿದಿದ್ದ ತ್ಯಾಜ್ಯ ವಿಲೇವಾರಿ ಮಾಡುವ ಮೂಲಕ 2,364 ಕೋಟಿ ರೂ . ಗಳಿಸಿದೆ!
ಅಕ್ಟೋಬರ್ ತಿಂಗಳಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಕೇಂದ್ರ ಸರಕಾರಿ ಕಚೇರಿಗಳಲ್ಲಿನ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ಕೇಂದ್ರ ಸರಕಾರ 650 ಕೋಟಿ ರೂ. ಗಳಿಸಿದೆ.
ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಕೇಂದ್ರ ಸಚಿವ ಡಾ. ಜಿತೇಂದ್ರ ಸಿಂಗ್, “ಭಾರತದ ಅತಿ ದೊಡ್ಡ ಸ್ವಚ್ಛತಾ ಅಭಿಯಾನವಾದ ‘ವಿಶೇಷ ಅಭಿಯಾನ 4.0’ ಅಡಿ 2021ರಿಂದ ಕೇವಲ ತ್ಯಾಜ್ಯ ವಿಲೇವಾರಿ ಮಾಡಿದ್ದರಿಂದ ದೇಶದ ಖಜಾನೆಗೆ 2,364 ಕೋಟಿ ರೂ. ಆದಾಯ ಬಂದಿದೆ” ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಸರಕಾರದ ಪ್ರಯತ್ನಗಳನ್ನು ಪ್ರಶಂಸಿಸಿದ್ದು, “ದಕ್ಷ ನಿರ್ವಹಣೆ ಹಾಗೂ ಸಕ್ರಿಯ ಕ್ರಮಗಳನ್ನು ಕೈಗೊಳ್ಳುವತ್ತ ಗಮನ ಹರಿಸುವ ಮೂಲಕ, ಈ ಪ್ರಯತ್ನಗಳು ಅದ್ಭುತ ಯಶ ಗಳಿಸಿವೆ. ಸಾಮೂಹಿಕ ಪ್ರಯತ್ನಗಳು ಹೇಗೆ ಸುಸ್ಥಿರ ಫಲಿತಾಂಶವನ್ನು ನೀಡಬಲ್ಲವು ಎಂಬುದನ್ನು ತೋರಿಸಿದೆ. ಆ ಮೂಲಕ ಸ್ವಚ್ಛತೆ ಮತ್ತು ಆರ್ಥಿಕ ದೂರದೃಷ್ಟಿಯನ್ನು ಉತ್ತೇಜಿಸಲಾಗಿದೆ” ಎಂದು ಹೇಳಿದ್ದಾರೆ.
2021ರಿಂದ 2024ರ ನಡುವೆ ಹೆಚ್ಚುವರಿ ಸಾಮಗ್ರಿಗಳ ಮಾರಾಟ ಮಾಡುವ ಪ್ರಯತ್ನಗಳಿಂದ 2,364 ಕೋಟಿ ರೂ. ಸಂಗ್ರಹವಾಗಿದೆ. 2023ರ 2.59 ಲಕ್ಷ ತಾಣಗಳಿಗೆ ಹೋಲಿಸಿದರೆ 2024ರಲ್ಲಿ 5.97 ಲಕ್ಷಕ್ಕೂ ಹೆಚ್ಚು ತಾಣಗಳನ್ನು ಅಭಿಯಾನದಲ್ಲಿ ಸೇರ್ಪಡೆ ಮಾಡಲಾಗಿದೆ ಎಂದು ಬೆಳೆಯುತ್ತಿರುವ ಅಭಿಯಾನದ ಯಶಸ್ಸಿನತ್ತ ಡಾ. ಜಿತೇಂದ್ರ ಸಿಂಗ್ ಬೆಳಕು ಚೆಲ್ಲಿದ್ದಾರೆ.
ಸರಕಾರಿ ಕಚೇರಿಗಳಲ್ಲಿ ಹಿಂಬಾಕಿ ಉಳಿದಿದ್ದ ಪತ್ರ ವ್ಯವಹಾರಗಳನ್ನೂ ಈ ಅಭಿಯಾನ ನಿಭಾಯಿಸಿದೆ. ತಮಗೆ ನೀಡಲಾಗಿದ್ದ ಗುರಿಯಲ್ಲಿ ಶೇ. 90-100ರಷ್ಟು ಪ್ರಗತಿ ಸಾಧಿಸಿರುವ ಹಲವಾರು ಇಲಾಖೆಗಳನ್ನು ಸಚಿವರು ಪ್ರಶಂಸಿದ್ದಾರೆ. ಇದೇ ವೇಗವನ್ನು ಕಾಯ್ದುಕೊಳ್ಳುವಂತೆ ಅವರು ಅಧಿಕಾರಿಗಳನ್ನು ಉತ್ತೇಜಿಸಿದ್ದಾರೆ.
ನವೆಂಬರ್ 14ರಿಂದ ವಿಶೇಷ ಅಭಿಯಾನ 4.0ದ ಮೌಲ್ಯಮಾಪನ ನಡೆಯಲಿದ್ದು, ಸರಕಾರಿ ಕಚೇರಿಗಳಲ್ಲಿ ಅಸ್ತವ್ಯಸ್ತ ಮುಕ್ತ ಹಾಗೂ ದಕ್ಷತೆಯ ಕೆಲಸದ ಪರಿಸರವನ್ನು ನಿರ್ವಹಿಸುವ ಪರಿಣಾಮಕಾರಿ ವಿಧಾನಗಳತ್ತ ಈ ಅಭಿಯಾನ ಗಮನ ಹರಿಸಲಿದೆ.