ಆಸ್ತಿಗಳ ಮೇಲೆ ವಕ್ಫ್ ಮಂಡಳಿಯ ಅಧಿಕಾರ ಮೊಟಕುಗೊಳಿಸುವ ಮಸೂದೆಗೆ ಮುಂದಾದ ಕೇಂದ್ರ
PC: PTI
ಹೊಸದಿಲ್ಲಿ: ಯಾವುದೇ ಆಸ್ತಿಗಳನ್ನು ವಕ್ಫ್ ಮಂಡಳಿ ಗುರುತಿಸಿ ಅದನ್ನು ತನ್ನ ನಿಯಂತ್ರಣಕ್ಕೆ ಪಡೆಯುವ ಅಧಿಕಾರವನ್ನು ಮೊಟಕುಗೊಳಿಸುವ ಸಂಬಂಧ ಮಸೂದೆ ಮಂಡಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಶುಕ್ರವಾರ ರಾತ್ರಿ ನಡೆದ ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ವಕ್ಫ್ ಕಾಯ್ದೆಗೆ 40ಕ್ಕೂ ಹೆಚ್ಚು ತಿದ್ದುಪಡಿಗಳನ್ನು ತರುವ ಬಗ್ಗೆ ಚರ್ಚಿಸಲಾಗಿದೆ ಎಂದು ಉನ್ನತ ಮೂಲಗಳು ಹೇಳಿವೆ. ವಕ್ಫ್ ಮಂಡಳಿಯ ಪರಿಶೀಲನೆಗೆ ವ್ಯಾಪ್ತಿ ಹಾಗೂ ದೇಶಾದ್ಯಂತ ಹಲವು ಲಕ್ಷ ಕೋಟಿ ರೂಪಾಯಿಗಳ ಆಸ್ತಿಯನ್ನು ಹೊಂದಿರುವ ವಕ್ಫ್ ಮಂಡಳಿಯ ನಿಯಂತ್ರಣಾಧಿಕಾರವನ್ನು ಕೂಡಾ ನಿಯಂತ್ರಿಸಲು ಉದ್ದೇಶಿಸಲಾಗಿದೆ ಎಂದು ತಿಳಿದುಬಂದಿದೆ.
ಈ ಮೊದಲು ಅನಿರ್ಬಂಧಿತವಾಗಿದ್ದ ವಕ್ಫ್ ಮಂಡಳಿಯ ಕ್ಲೇಮ್ ಗಳು ಕಡ್ಡಾಯ ದೃಢೀಕರಣಕ್ಕೆ ಅನುಸಾರವಾಗಿರುವಂತೆ ಅಗತ್ಯ ತಿದ್ದುಪಡಿ ತರಲು ಉದ್ದೇಶಿಸಲಾಗಿದೆ. ವಕ್ಫ್ ಮಂಡಳಿಯ ಆಸ್ತಿಗಳು ಹಾಗೂ ವೈಯಕ್ತಿಕ ಮಾಲೀಕರ ಕ್ಲೇಮ್ ಗಳು ಮತ್ತು ಪ್ರತಿ ಕ್ಲೇಮ್ ಗಳ ಪರಿಶೀಲನೆಗೆ ಕೂಡ ಪರಿಶೀಲನೆಯನ್ನು ಕಡ್ಡಾಯಪಡಿಸಲು ತಿದ್ದುಪಡಿ ಉದ್ದೇಶಿದೆ.
ಶುಕ್ರವಾರ ನಡೆದ ಸಂಪುಟ ಚರ್ಚೆ ಬಗೆಗಿನ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಯಾವುದೇ ವಿವರಗಳನ್ನು ನೀಡಿಲ್ಲವಾದರೂ, ವಕ್ಫ್ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮುಂದಿನ ವಾರ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಆಸ್ತಿಗಳ ಕಡ್ಡಾಯ ದೃಢೀಕರಣ ಕುರಿತ ತಿದ್ದುಪಡಿಯು ವಕ್ಫ್ ಮಂಡಳಿಯ ಅಧಿಕಾರಕ್ಕೆ ಕಡಿವಾಣ ಹಾಕಲಿದ್ದು, ಇದು ಪ್ರಸ್ತಾವಿತ ತಿದ್ದುಪಡಿಗಳಲ್ಲಿ ಅತ್ಯಂತ ಪ್ರಮುಖವಾದದ್ದು ಎಂದು ಮೂಲಗಳಿಂದ ಗೊತ್ತಾಗಿದೆ. ಪ್ರಸ್ತುತ ವಕ್ಫ್ ಮಂಡಳಿಗಳು ಯಾವುದೇ ಆಸ್ತಿಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲು ಅಧಿಕಾರವಿದೆ. ದೇಶಾದ್ಯಂತ 9.4 ಲಕ್ಷ ಎಕರೆ ಪ್ರದೇಶದ 8.7 ಲಕ್ಷ ಆಸ್ತಿಗಳು ಇದೀಗ ವಕ್ಫ್ ಮಂಡಳಿಯ ವಶದಲ್ಲಿವೆ.