ವಿಪಕ್ಷಗಳ ರಾಜ್ಯಗಳ ಮೇಲೆ ಅತಿರೇಕದ ಕ್ರಮ ಕೈಗೊಳ್ಳುವ ಕೇಂದ್ರ, ತನ್ನದೇ ಆಡಳಿತವಿರುವ ರಾಜ್ಯಗಳ ಮೇಲೆ ಕ್ರಮ ಕೈಗೊಳ್ಳುವುದಿಲ್ಲ: ಸುಪ್ರೀಂಕೋರ್ಟ್ ತರಾಟೆ
ಹೊಸದಿಲ್ಲಿ: ಸಂವಿಧಾನದತ್ತ ಹಕ್ಕುಗಳನ್ನು ಖಾತ್ರಿಗೊಳಿಸುವಲ್ಲಿ ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ಮಂಗಳವಾರ ಚಾಟಿ ಬೀಸಿರುವ ಸುಪ್ರೀಂಕೋರ್ಟ್, ತನಗೆ ವಿಧೇಯವಲ್ಲದ ರಾಜ್ಯಗಳ ವಿರುದ್ಧ ಅತಿರೇಕದ ಕ್ರಮ ಕೈಗೊಳ್ಳುವ ಕೇಂದ್ರ ಸರ್ಕಾರ, ತನ್ನದೇ ರಾಜಕೀಯ ಪಕ್ಷದಿಂದ ಆಡಳಿತಕ್ಕೊಳಪಟ್ಟಿರುವ ರಾಜ್ಯಗಳ ವಿರುದ್ಧ ಕ್ರಮ ಕೈಗೊಳ್ಳುವುದರಿಂದ ದೂರ ಉಳಿದಿದೆ ಎಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ ಎಂದು timesofindia.com ವರದಿ ಮಾಡಿದೆ.
"1992ರಲ್ಲಿ ತಂದಿರುವ ಸಾಂವಿಧಾನಿಕ ತಿದ್ದುಪಡಿಯನ್ನು ಈವರೆಗೆ ನಾಗಾಲ್ಯಾಂಡ್ ರಾಜ್ಯದಲ್ಲಿ ಜಾರಿಗೊಳಿಸಿಲ್ಲ. ಈ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ಕೈ ತೊಳೆದುಕೊಳ್ಳಲು ಸಾಧ್ಯವಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಲೂ ಸಂಜಯ್ ಕಿಶನ್ ಕೌಲ್ ಹಾಗೂ ಸುಧಾಂಶು ಧುಲಿಯ ಅವರನ್ನೊಳಗೊಂಡಿದ್ದ ನ್ಯಾಯಪೀಠವು ಯಾವುದೇ ಹಿಂಜರಿಕೆ ತೋರಿಲ್ಲ.
ಕೇಂದ್ರ ಸರ್ಕಾರವು ವಿರೋಧ ಪಕ್ಷಗಳ ಆಡಳಿತವಿರುವ ರಾಜ್ಯಗಳ ವಿರುದ್ಧ ಕ್ರಮ ಕೈಗೊಳ್ಳಲು ತೋರುವ ಉತ್ಸುಕತೆಯನ್ನು ತನ್ನದೇ ಪಕ್ಷದ ಆಡಳಿತವಿರುವ ರಾಜ್ಯಗಳ ವಿರುದ್ಧ ತೋರುವುದಿಲ್ಲ ಎಂದು ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ.
"ನೀವೇನು ಮಾಡುತ್ತಿದ್ದೀರಿ? ಅಲ್ಲಿಯೂ ಕೂಡಾ ನಿಮ್ಮದೇ ಪಕ್ಷ ಅಧಿಕಾರದಲ್ಲಿದೆ. ಹೀಗಾಗಿ ನೀವು ರಾಜಕೀಯವಾಗಿ ಒಂದೇ ಪುಟದಲ್ಲಿಲ್ಲ ಎಂದು ಹೇಳಲು ಬರುವುದಿಲ್ಲ. ಕೇಂದ್ರ ಸರ್ಕಾರ ಸಂವಿಧಾನವನ್ನು ಜಾರಿಗೊಳಿಸುತ್ತಿಲ್ಲ ಎಂದು ನಮಗೆ ಹೇಳಬೇಡಿ. ಅದನ್ನು ಜಾರಿಗೊಳಿಸಲು ನೀವು ಸಕ್ರಿಯ ಪಾತ್ರ ವಹಿಸುವುದನ್ನು ಖಾತ್ರಿಗೊಳಿಸಬೇಕು. ನೀವಿಬ್ಬರೂ ಒಂದೇ ಪಕ್ಷಕ್ಕೆ ಸೇರಿದವರಾಗಿದ್ದೀರಿ. ನೀವು ನಿಮಗೆ ವಿಧೇಯವಲ್ಲದ ಇತರೆ ರಾಜ್ಯಗಳ ವಿರುದ್ಧ ಅತಿರೇಕದ ಕ್ರಮ ಕೈಗೊಳ್ಳುತ್ತೀರಿ. ಆದರೆ, ನಿಮ್ಮದೇ ಪಕ್ಷ ಅಧಿಕಾರದಲ್ಲಿರುವ ಸರ್ಕಾರಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ" ಎಂದು ನ್ಯಾಯಪೀಠವು ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿತು.
"ಕೇಂದ್ರ ಸರ್ಕಾರವು ತನ್ನ ಕೈ ತೊಳೆದುಕೊಳ್ಳಲು ಸಾಧ್ಯವಿಲ್ಲ. ತನ್ನದೇ ಪಕ್ಷವು ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲ್ಲಿರುವುದರಿಂದ ಕೇಂದ್ರ ಸರ್ಕಾರದ ಕೆಲಸವು ಸರಳವಾಗಿದೆ. ನಿಮಗೆ (ರಾಜ್ಯ ಸರ್ಕಾರ) ಕೊನೆಯ ಅವಕಾಶದ ಪೈಕಿ ಕೊನೆಯ ಅವಕಾಶ ನೀಡುತ್ತಿದ್ದೇವೆ" ಎಂದೂ ನ್ಯಾಯಪೀಠ ಎಚ್ಚರಿಕೆ ನೀಡಿದೆ.
ಕೇಂದ್ರ ಸರ್ಕಾರದ ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ.ನಟರಾಜ್, ಸಾಂವಿಧಾನಿಕ ತಿದ್ದುಪಡಿ ಜಾರಿಯನ್ನು ಖಾತ್ರಿಪಡಿಸಲು ಕೆಲ ಸಮಯಾವಕಾಶ ಬೇಕು ಎಂದು ಕೋರಿದರು. ಮಣಿಪುರ ಹಿಂಸಾಚಾರವನ್ನು ಪರೋಕ್ಷವಾಗಿ ಉಲ್ಲೇಖಿಸಿದ ಅವರು, ಈಶಾನ್ಯ ರಾಜ್ಯಗಳಲ್ಲಿನ ಪರಿಸ್ಥಿತಿಯು ಅನುಕೂಲಕರವಾಗಿಲ್ಲದಿರುವುದರಿಂದ ಮೂರು ತಿಂಗಳ ಸಮಯಾವಕಾಶ ನೀಡಬೇಕು ಎಂದು ಕೋರಿದರು.
ಆದರೆ, ಸೆಪ್ಟೆಂಬರ್ 26ರೊಳಗೆ ಸಾಂವಿಧಾನಿಕ ತಿದ್ದುಪಡಿಯನ್ನು ಜಾರಿಗೊಳಿಸಬೇಕು ಎಂದು ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ನ್ಯಾಯಪೀಠವು ಕಾಲಮಿತಿ ನಿಗದಿಗೊಳಿಸಿದೆ.