ಚಂಡೀಗಢ ಮೇಯರ್ ಮನೋಜ್ ಸೋಂಕರ್ ರಾಜೀನಾಮೆ
ಚುನಾವಣಾ ಅಕ್ರಮದ ಬಗ್ಗೆ ಸುಪ್ರೀಂಕೋರ್ಟ್ ನಲ್ಲಿ ಸೋಮವಾರ ವಿಚಾರಣೆ
Photo| hindustantimes.com
ಚಂಡೀಗಢ: ಚಂಡೀಗಢದ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ನ ವಿಚಾರಣೆಗೆ ಒಂದು ದಿನ ಮೊದಲು, ಭಾರತೀಯ ಜನತಾ ಪಕ್ಷದ (ಬಿಜೆಪಿ) ಮೇಯರ್ ಮನೋಜ್ ಸೋಂಕರ್ ರವಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು hindustantimes ವರದಿ ಮಾಡಿದೆ.
ಮೇಯರ್ ಚುನಾವಣೆ ಪ್ರಕರಣವನ್ನು ಫೆಬ್ರವರಿ 19 ರಂದು ಸುಪ್ರೀಂ ಕೋರ್ಟ್ನಲ್ಲಿ ಪಟ್ಟಿ ಮಾಡಲಾಗಿದೆ. ಮೇಯರ್ ಚುನಾವಣೆಯ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರನ್ನು ಖುದ್ದು ಹಾಜರಾಗುವಂತೆ ಸುಪ್ರೀಂ ಕೋರ್ಟ್ ಈಗಾಗಲೇ ಸೂಚಿಸಿದೆ ಎನ್ನಲಾಗಿದೆ. ಮಸಿಹ್ ಅವರು ಮತಪತ್ರಗಳನ್ನು ವಿರೂಪಗೊಳಿಸಿದ್ದಾರೆ ಮತ್ತು ನಂತರ ಅವುಗಳನ್ನು ಅಮಾನ್ಯವೆಂದು ಘೋಷಿಸಿದ್ದಾರೆ ಎಂದು ಕಾಂಗ್ರೆಸ್ ಮತ್ತು ಎಎಪಿ ಆರೋಪಿಸಿದೆ ಎಂದು ತಿಳಿದು ಬಂದಿದೆ.
ಮೇಯರ್ ಮನೋಜ್ ಸೋಂಕರ್ ಅವರು ಚಂಡೀಗಢ ಮುನ್ಸಿಪಲ್ ಕಾರ್ಪೋರೇಶನ್ನ ಆಯುಕ್ತರಿಗೆ ತಮ್ಮ ರಾಜೀನಾಮೆಯನ್ನು ತಿಳಿಸಿದ್ದಾರೆ.
ಜನವರಿ 30 ರಂದು ನಡೆದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಅನಿಲ್ ಮಸಿಹ್ ಎಂಟು ಮತಗಳನ್ನು ತಿರುಚುತ್ತಿರುವ ವೀಡಿಯೊವನ್ನು ಸುಪ್ರೀಂ ಕೋರ್ಟ್ ನಿಷ್ಠುರವಾಗಿ ಪರಿಗಣಿಸಿದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ಸದನದಲ್ಲಿ ಒಟ್ಟು 20 ಸಂಖ್ಯಾಬಲ ಹೊಂದಿದ್ದ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್, ಎಂಟು ಮತಗಳು ಅಸಿಂಧುವಾದ ನಂತರ 16 ಬಲ ಹೊಂದಿದ್ದ ಬಿಜೆಪಿಗೆ ಮೇಯರ್ ಸ್ಥಾನವನ್ನು ನೀಡಬೇಕಾಯಿತು.
ವಾರ್ಡ್ 7ರ ಕೌನ್ಸಿಲರ್ ಆಗಿರುವ 39 ವರ್ಷದ ಮನೋಜ್ ಸೋಂಕರ್ 16 ಮತಗಳನ್ನು ಪಡೆದರೆ, ಎಎಪಿ-ಕಾಂಗ್ರೆಸ್ ಮೈತ್ರಿಕೂಟದ ಕುಲದೀಪ್ ಧಲೋರ್ 12 ಮತಗಳನ್ನು ಪಡೆದರು. ಒಟ್ಟು 36 ಮತಗಳಲ್ಲಿ ಎಂಟು ಮತಗಳು ಅಸಿಂಧುವಾದವು..
ಮದ್ಯದ ವ್ಯಾಪಾರ ನಡೆಸುತ್ತಿರುವ ಮನೋಜ್ ಸೋಂಕರ್ 7ನೇ ತರಗತಿವರೆಗೆ ಓದಿದ್ದಾರೆ. ಮೂಲಗಳ ಪ್ರಕಾರ, ಫೆಬ್ರವರಿ 17 ರಂದು ಪ್ರಾರಂಭವಾದ ಲೋಕಸಭಾ ಚುನಾವಣೆಯ ಕಾರ್ಯತಂತ್ರದ ಕುರಿತು ಚರ್ಚಿಸುವ ಉದ್ದೇಶದಿಂದ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಯ ಎರಡು ದಿನಗಳ ರಾಷ್ಟ್ರೀಯ ಸಮಾವೇಶದಲ್ಲಿ ಪಕ್ಷದ ಹೈಕಮಾಂಡ್ ಸೋಂಕರ್ ಅವರನ್ನು ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸೂಚಿಸಿದೆ ಎಂದು ತಿಳಿದು ಬಂದಿದೆ.