ಚಂಡೀಗಢ ಮೇಯರ್ ಚುನಾವಣೆ ವಿವಾದ: 8 ಮತಗಳು ʼಸಿಂಧುʼ ಎಂದ ಸುಪ್ರೀಂ ಕೋರ್ಟ್
ಮರು ಮತಎಣಿಕೆಗೆ ಆದೇಶ
ಚುನಾವಣಾಧಿಕಾರಿ ಅನಿಲ್ ಮಸೀಹ್ (Photo: NDTV)
ಹೊಸದಿಲ್ಲಿ: ವಿವಾದಿತ ಚಂಡೀಗಢ ಮೇಯರ್ ಚುನಾವಣೆಗೆ ಸಂಬಂಧಿಸಿದಂತೆ ಇಂದು ಮತಪತ್ರಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್, ರಿಟರ್ನಿಂಗ್ ಆಫೀಸರ್ ಆಗಿದ್ದ ಅನಿಲ್ ಮಸೀಹ್ ಅವರು ಅಸಿಂಧು ಎಂದು ಘೋಷಿಸಿದ್ದ ಎಂಟು ಮತಪತ್ರಗಳನ್ನು ಸಿಂಧು ಎಂದು ಘೋಷಿಸಿದೆ ಹಾಗೂ ಮತಪತ್ರಗಳ ಮರುಎಣಿಕೆಗೆ ಆದೇಶಿಸಿದೆ.
ಚಂಡೀಗಢ ಮೇಯರ್ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅನಿಲ್̧ ಮಸೀಹ್ ಮತಪತ್ರಗಳನ್ನು ತಿರುಚಿ ಬಿಜೆಪಿ ಅಭ್ಯರ್ಥಿಯ ವಿಜಯಕ್ಕೆ ಸಹಾಯ ಮಾಡಿದ್ದಾರೆಂಬ ಆರೋಪವಿದೆ.
ಚಂಡೀಗಢ ಸ್ಥಳೀಯಾಡಳಿತದಲ್ಲಿ ಆಪ್ಗೆ ಸ್ಪಷ್ಟ ಬಹುಮತವಿದ್ದರೂ ಚುನಾವಣಾಧಿಕಾರಿ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿ ಬಿಜೆಪಿ ಅಭ್ಯರ್ಥಿಯನ್ನು ವಿಜಯಿಯೆಂದು ಘೋಷಿಸಿದ್ದರು.
ಆದರೆ ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆಗೆ ಮುನ್ನವೇ ಬಿಜೆಪಿ ಮೇಯರ್ ಮನೋಜ್ ಸೋಂಕರ್ ರಾಜೀನಾಮೆ ನೀಡಿದ್ದರಲ್ಲದೆ ಇದಕ್ಕಿಂತ ಮುನ್ನವೇ ಮೂರು ಆಪ್ ಕೌನ್ಸಿಲರ್ಗಳು ಬಿಜೆಪಿಗೆ ವಲಸೆ ಹೋಗಿದ್ದರು.
ಸೋಮವಾರ ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರಾದ ಅನಿಲ್ ಮೆಸಿಹ್ ಮತಪತ್ರಗಳನ್ನು ತಿರುಚಿದ್ದನ್ನು ಒಪ್ಪಿಕೊಂಡಿದ್ದರು. ಅವರನ್ನು ತೀವ್ರ ತರಾಟೆಗೆ ಅದಾಗಲೇ ತೆಗೆದುಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರ ನೇತೃತ್ಬದ ಪೀಠ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿತ್ತಲ್ಲದೆ ಕುದುರೆ ವ್ಯಾಪಾರದ ವಿರುದ್ಧ ಕಳವಳ ವ್ಯಕ್ತಪಡಿಸಿತ್ತು.
ಮರುಚುನಾವಣೆ ನಡೆಸುವ ಬದಲು ಈಗಾಗಲೇ ಮತಗಳನ್ನು ಚಲಾಯಿಸಿರುವುದರಿಂದ ಮತಪತ್ರಗಳನ್ನು ಪರಿಶೀಲಿಸುವುದಾಗಿ ಹೇಳಿತ್ತು.