ಚಂದ್ರಯಾನ-3: ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಂ ಲ್ಯಾಂಡರ್
Photo: Twitter/ISRO
ಹೊಸದಿಲ್ಲಿ: ಚಂದ್ರಯಾನ-3ರ ಲ್ಯಾಂಡರ್ 'ವಿಕ್ರಂ' ಇಂದು ಬಾಹ್ಯಾಕಾಶ ನೌಕೆಯಿಂದ ಯಶಸ್ವಿಯಾಗಿ ಬೇರ್ಪಟ್ಟಿದ್ದು ಆಗಸ್ಟ್ 23ರಂದು ಚಂದಿರನ ಅಂಗಳಕ್ಕೆ ಅದು ಕಾಲಿಡುವ ನಿರೀಕ್ಷೆಯಿದೆ.
ಇಸ್ರೋ ಈ ಕುರಿತು ಟ್ವೀಟ್ ಮಾಡಿದೆ. “ಎಲ್ಎಂ ಯಶಸ್ವಿಯಾಗಿ ಪ್ರೊಪಲ್ಶನ್ ಮೋಡ್(ಪಿಎಂ) ನಿಂದ ಬೇರ್ಪಟ್ಟಿದೆ. ನಾಳಿನ ಉದ್ದೇಶಿತ ಡಿಬೂಸ್ಟಿಂಗ್ ನಂತರ ಎಲ್ಎಂ ಸ್ವಲ್ಪ ಕೆಳಗಿನ ಕಕ್ಷೆಗೆ ಇಳಿಯಲಿದೆ,” ಎಂದು ಇಸ್ರೋ ಟ್ವೀಟ್ ಹೇಳಿದೆ.
ಇಂದು ಬಾಹ್ಯಾಕಾಶ ನೌಕೆಯಿಂದ ಪ್ರತ್ಯೇಕಗೊಂಡ ಲ್ಯಾಂಡರ್ “ಡಿಬೂಸ್ಟ್” (ನಿಧಾನಗೊಳ್ಳುವ ಪ್ರಕ್ರಿಯೆ) ಗೆ ಒಳಗಾಗಲಿದೆ. ಇದರಿಂದ ಲ್ಯಾಂಡರ್ ಅನ್ನು ಚಂದ್ರನಿಗೆ ಅತ್ಯಂತ ಸನಿಹದ ಬಿಂದು ಆಗಿರುವ ಪೆರಿಲ್ಯೂನ್ (30 ಕಿಮೀ) ಮತ್ತು ಅತ್ಯಂತ ದೂರದ ಬಿಂದು (100 ಕಿಮೀ) ಇರುವ ಕಕ್ಷೆಯಲ್ಲಿ ಇರಿಸಬಹುದಾಗಿದೆ.
ಈ ಕಕ್ಷೆಯಿಂದ ಚಂದ್ರನ ದಕ್ಷಿಣ ಪೋಲಾರ್ ಪ್ರಾಂತ್ಯದಲ್ಲಿ ಸಾಫ್ಟ್ ಲ್ಯಾಂಡಿಂಗ್ ಆಗಲು ಆಗಸ್ಟ್ 23ರಂದು ಪ್ರಯತ್ನಿಸಲಾಗುವುದು ಎಂದು ಇಸ್ರೋ ಹೇಳಿದೆ.
ಚಂದಿರನನ್ನು ಸ್ಪರ್ಶಿಸಿದ ಮೇಲೆ ಪ್ರಗ್ಯಾನ್ ರೋವರ್ನ ಛಾಯಾಚಿತ್ರವನ್ನು ಲ್ಯಾಂಡರ್ ತೆಗೆಯಲಿದ್ದು ಅದು ಚಂದಿರನ ಅಂಗಳದಲ್ಲಿನ ಸೀಸ್ಮಿಕ್ ಚಟುವಟಿಕೆಯನ್ನು ಅಧ್ಯಯನ ನಡೆಸುವ ಉಪಕರಣಗಳನ್ನು ಅಲ್ಲಿ ನಿಯೋಜಿಸಲಿದೆ.