ಅನಾನುಕೂಲಕರ ಅಂಶಗಳು ಕಂಡುಬಂದರೆ ಚಂದ್ರಯಾನ-3 ಲ್ಯಾಂಡಿಂಗ್ ಮುಂದೂಡಿಕೆ: ಇಸ್ರೊ
Photo: twitter.com/isro
ಹೊಸದಿಲ್ಲಿ: ಚಂದ್ರಯಾನ-3 ಬಾಹ್ಯಾಕಾಶ ನೌಕೆ ಚಂದ್ರನ ಮೇಲ್ಮೈ ಮೇಲೆ ಈ ತಿಂಗಳ 23ರಂದು ಸುಲಲಿತವಾಗಿ ಇಳಿಯುವ ನಿರೀಕ್ಷೆ ಇದ್ದು, ಈ ಐತಿಹಾಸಿಕ ಘಟ್ಟ ತಲುಪುವ ಕ್ಷಣವನ್ನು ಇಡೀ ವಿಶ್ವ ಕಾಯುತ್ತಿರುವ ನಡುವೆಯೇ, ಎಲ್ಲ ಅಂಶಗಳು ಅನುಕೂಲಕರ ಎನಿಸಿದರೆ ಮಾತ್ರ ಬಾಹ್ಯಾಕಾಶ ನೌಕೆಯನ್ನು ಚಂದ್ರನ ಮೇಲ್ಮೈಯಲ್ಲಿ ಇಳಿಸಲಾಗುತ್ತಿದೆ. ಇಲ್ಲದಿದ್ದಲ್ಲಿ ಆಗಸ್ಟ್ 27ರಂದು ಬಾಹ್ಯಾಕಾಶ ನೌಕೆ ಇಳಿಸುವ ಹೊಸ ಪ್ರಯತ್ನ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಯ ಹಿರಿಯ ವಿಜ್ಞಾನಿಯೊಬ್ಬರು ಬಹಿರಂಗಪಡಿಸಿದ್ದಾರೆ.
"ಚಂದ್ರಯಾನ-3 ಲ್ಯಾಂಡ್ ಆಗುವ ಎರಡು ಗಂಟೆ ಮೊದಲು, ಲ್ಯಾಂಡರ್ ಮಾಡ್ಯೂಲ್ನ ಆರೋಗ್ಯ ಹಾಗೂ ಚಂದ್ರನ ಸ್ಥಿತಿಗತಿಯನ್ನು ನೋಡಿಕೊಂಡು ಆಕಾಶನೌಕೆಯನ್ನು ಆ ಸಮಯದಲ್ಲಿ ಇಳಿಸಬೇಕೇ ಅಥವಾ ಬೇಡವೇ ಎಂಬ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳಲಿದ್ದೇವೆ. ಒಂದು ವೇಳೆ ಅನಾನುಕೂಲಕರ ಅಂಶಗಳು ಕಂಡಬಂದಲ್ಲಿ ಮಾಡ್ಯೂಲನ್ನು ಆಗಸ್ಟ್ 27ರಂದು ಚಂದ್ರನ ಮೇಲೆ ಇಳಿಸಲಾಗುವುದು" ಎಂದು ಇಸ್ರೋ ಬಾಹ್ಯಾಕಾಶ ಅನ್ವಯಿಕೆ ಕೇಂದ್ರದ ನಿರ್ದೇಶಕ ನೀಲೇಶ್ ಎಂ. ದೇಸಾಯಿ ಹೇಳಿದ್ದಾರೆ.
ಚಂದ್ರಯಾನ-3 ಮಿಷನ್ನ ಲ್ಯಾಂಡರ್ ಮಾಡ್ಯೂಲ್ ವಿಕ್ರಮ್ ಮೂಲ ವೇಳಾಪಟ್ಟಿಯಂತೆ ಚಂದ್ರನ ಮೇಲ್ಮೈಯನ್ನು ತಲುಪುವ ನಿರೀಕ್ಷೆ ಇದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಇಸ್ರೊ ಪ್ರಕಾರ, ವಿಕ್ರಮ್ ಲ್ಯಾಂಡಿಂಗ್ ಪ್ರಯತ್ನವನ್ನು ಆಗಸ್ಟ್ 23ರಂದು ಸಂಜೆ 6 ಗಂಟೆಯ ಬಳಿಕ ಮಾಡಲಾಗುತ್ತದೆ. ಇದು ಯಶಸ್ವಿಯಾದಲ್ಲಿ ಚಂದ್ರನ ಮೇಲೆ ಸುಲಲಿತವಾಗಿ ಇಳಿದ ನಾಲ್ಕನೇ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಅಮೆರಿಕ, ರಷ್ಯಾ ಹಾಗೂ ಚೀನಾ ಈ ಮೊದಲು ಈ ಸಾಧನೆ ಮಾಡಿವೆ.