ಚಂದ್ರಯಾನ-3: ಬಾಹ್ಯಾಕಾಶ ನೌಕೆಯ ಸುರಕ್ಷಿತ ಲ್ಯಾಂಡಿಂಗ್ ಗೆ ಇರುವ ಬಹುದೊಡ್ಡ ಸವಾಲು ಇದು..
Photo: twitter.com/isro
ಹೊಸದಿಲ್ಲಿ: ಚಂದ್ರಯಾನ-3 ಕಳುಹಿಸಿರುವ ವಿಕ್ರಂ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಸುರಕ್ಷಿತವಾಗಿ ಇಳಿಯುವ ನಿರೀಕ್ಷೆ ಕೋಟ್ಯಂತರ ಭಾರತೀಯರಲ್ಲಿ ಮೂಡಿರುವ ನಡುವೆಯೇ ಸುರಕ್ಷಿತ ಲ್ಯಾಂಡಿಂಗ್ ಗೆ ಇರುವ ಬಲುದೊಡ್ಡ ಸವಾಲೆಂದರೆ ಚಂದ್ರನ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆಯನ್ನು ಅಡ್ಡರೇಖೆಯಿಂದ ಲಂಬರೇಖೆಯ ಸ್ಥಾನಕ್ಕೆ ತರುವುದು ಎಂದು ಬಾಹ್ಯಾಕಾಶ ತಂತ್ರಜ್ಞ ಪಿ.ಕೆ.ಘೋಷ್ ಹೇಳಿದ್ದಾರೆ.
"ನಮ್ಮ ಮುಂದಿರುವ ಅತಿದೊಡ್ಡ ಸವಾಲು ಎಂದರೆ ಬಾಹ್ಯಾಕಾಶ ನೌಕೆಯನ್ನು ಅಡ್ಡರೇಖೆಯ ಸ್ಥಿತಿಯಿಂದ ಲಂಬರೇಖೆಯ ಸ್ಥಿತಿಗೆ ತರುವುದು. ಇದು ತೀರಾ ಕಠಿಣ. ಈ ಎಲ್ಲ ಆಯಾಮಗಳ ಬಗ್ಗೆ ಗಮನ ಹರಿಸಬೇಕಿದೆ" ಎಂಧು ಎಎನ್ಐ ಜತೆ ಮಾತನಾಡಿದ ಅವರು ಸ್ಪಷ್ಟಪಡಿಸಿದರು. ಚಂದ್ರಯಾನ-3 ಭಾನುವಾರ ನಸುಕಿನಲ್ಲಿ ಎರಡನೇ ಹಾಗೂ ಅಂತಿಮ ಡಿಬೂಸ್ಟಿಂಗ್ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದು, ಬುಧವಾರ ಸಂಜೆ 6.04 ಗಂಟೆಗೆ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಿರೀಕ್ಷೆ ಇದೆ ಎಂದು ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಪ್ರಕಟಿಸಿದೆ.
"ಡಿಬೂಸ್ಟಿಂಗ್ ಎಂದರೆ ಬಾಹ್ಯಾಕಾಶ ತನ್ನ ವೇಗವನ್ನು ಕಡಿಮೆಗೊಳಿಸುವ ಪ್ರಕ್ರಿಯೆ. ಗಂಟೆಗೆ 6000 ಕಿಲೋಮೀಟರ್ನಷ್ಟು ಅದ್ಭುತ ವೇಗದಲ್ಲಿ ಚರಿಸುತ್ತಿರುವ ಬಾಹ್ಯಾಕಾಶ ನೌಕೆಯನ್ನು ಶೂನ್ಯದ ಸನಿಹಕ್ಕೆ ಅಂದರೆ ಸೆಕೆಂಡ್ಗೆ ಒಂದು ಮೀಟರ್ ವೇಗಕ್ಕೆ ಇಳಿಸಬೇಕಾಗುತ್ತದೆ" ಎಂದು ಅವರು ವಿವರಿಸಿದರು. ಈ ಪ್ರಕ್ರಿಯೆಯಲ್ಲಿ ಬಾಹ್ಯಾಕಾಶ ನೌಕೆಯನ್ನು ವರ್ತುಲ ಕಕ್ಷೆಗೆ ತರುವ ಪ್ರಯತ್ನ ಮಾಡಬೇಕಾಗುತ್ತದೆ. ಇದೀಗ ಬಹುತೇಕ ವರ್ತುಲಾಕಾರದಲ್ಲಿ ಚಲಿಸುತ್ತಿದೆ. ಚಂದ್ರನು ಭೂಮಿಗೆ ಅತ್ಯಂತ ಸನಿಹದಲ್ಲಿರುವ ಕೇಂದ್ರವಾದ ಪೆರಿಜಿಗೆ ಇನ್ನು ಕೇವಲ 25 ಕಿಲೋಮೀಟರ್ ದೂರವಿದೆ. ಎರಡನೇ ಡಿಬೂಸ್ಟಿಂಗ್ನಲ್ಲಿ ಕಕ್ಷೆಗೆ ಹೊಂದಿಸುವ ಪರಿವರ್ತನೆಗಳನ್ನು ಮಾಡಲಾಗಿದೆ. ಅಂತಿಮವಾಗಿ 23ರಂದು ಇದು ಕೆಳಕ್ಕೆ ಬರುವುದನ್ನು ನೀವು ಕಾಣಬಹುದು ಎಂದು ಹೇಳಿದರು.