ಉತ್ತರ ಪ್ರದೇಶ | ನ್ಯಾಯಾಲಯದ ಆವರಣದಲ್ಲಿ ವಕೀಲೆ ಮೇಲೆ ಆಸಿಡ್ ದಾಳಿ : ಆರೋಪ

ಸಾಂದರ್ಭಿಕ ಚಿತ್ರ
ಲಕ್ನೋ : ಉತ್ತರಪ್ರದೇಶದ ಮೊರಾದಾಬಾದ್ ನ್ಯಾಯಾಲಯದ ಆವರಣದಲ್ಲಿ ವಕೀಲೆ ಮೇಲೆ ಆಸಿಡ್ ದಾಳಿ ನಡೆಸಿರುವ ಆರೋಪ ಕೇಳಿ ಬಂದಿದೆ.
ಮೊರಾದಾಬಾದ್ನ ಠಾಕುರ್ದ್ವಾರ ತಹಸಿಲ್ನ ನ್ಯಾಯಾಲಯದಲ್ಲಿ ಈ ಘಟನೆ ನಡೆದಿದೆ. ವಕೀಲೆಯ ಕಿರುಚಾಟವನ್ನು ಕೇಳಿ ಸಹ ವಕೀಲರು ಮತ್ತು ಇತರರು ಆಕೆಯ ಬಳಿ ತೆರಳಿದ್ದು, ಈ ವೇಳೆ ಆರೋಪಿಗಳು ಪರಾರಿಯಾಗಿದ್ದಾರೆ. ಠಾಕುರ್ದ್ವಾರದಲ್ಲಿರುವ ಸರಕಾರಿ ಆಸ್ಪತ್ರೆಗೆ ವಕೀಲೆಯನ್ನು ದಾಖಲಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿದ ಸಂತ್ರಸ್ತ ವಕೀಲೆ, ನ್ಯಾಯಾಲಯದ ಮುಖ್ಯ ಗೇಟ್ ಬಳಿ ಅಡಗಿಕೊಂಡಿದ್ದ ಸಚಿನ್ ಕುಮಾರ್ ಮತ್ತು ನಿತಿನ್ ಕುಮಾರ್ ದಹಿಸಬಹುದಾದ ವಸ್ತುವನ್ನು ನನ್ನ ಮೇಲೆ ಎಸೆದರು. ರಾಸಾಯನಿಕವು ನನ್ನ ಬಟ್ಟೆ ಮತ್ತು ದೇಹದ ಭಾಗಗಳನ್ನು ಸುಟ್ಟುಹಾಕಿದೆ ಎಂದು ಹೇಳಿದ್ದಾರೆ.
ಆರೋಪಿಗಳು ಉತ್ತರಾಖಂಡದ ಉಧಮ್ ಸಿಂಗ್ ನಗರದ ನಿವಾಸಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ವಿರುದ್ಧ ಮೊರಾದಾಬಾದ್ನ ಠಾಕುರ್ದ್ವಾರ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ ಸೆಕ್ಷನ್ 124(1) ಮತ್ತು 351(3) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಆಕಾಶ್ ಸಿಂಗ್ ಪ್ರತಿಕ್ರಿಯಿಸಿ, ಘಟನೆಯು ಅನುಮಾನಾಸ್ಪದವಾಗಿದೆ. ಇದು ಆಸಿಡ್ ದಾಳಿ ಪ್ರಕರಣವಲ್ಲ. ಕೆಲವು ದಹನಕಾರಿ ವಸ್ತುಗಳನ್ನು ವಕೀಲರ ಮೇಲೆ ಎಸೆಯಲಾಗಿದೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.