ಚೆನ್ನೈ: ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ್ದ ನಾಲ್ವರು ಪ್ರೇಕ್ಷಕರು ಮೃತ್ಯು
x.com/naveenjain2006
ಚೆನ್ನೈ: ಭಾರತೀಯ ವಾಯುಪಡೆ ಇಲ್ಲಿನ ಮರೀನಾ ಬೀಚ್ ನಲ್ಲಿ ಆಯೋಜಿಸಿದ್ದ ವೈಮಾನಿಕ ಪ್ರದರ್ಶನ ವೀಕ್ಷಿಸಲು ಕಿಕ್ಕಿರಿದು ಸೇರಿದ್ದ ಪ್ರೇಕ್ಷಕರ ಪೈಕಿ ಆಯಾಸ ಮತ್ತು ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಅಸ್ವಸ್ಥರಾದ ನಾಲ್ಕು ಮಂದಿ ಮೃತಪಟ್ಟಿದ್ದು, 90 ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುಮಾರು 15 ಲಕ್ಷ ಮಂದಿ ಈ ವೈಮಾನಿಕ ಪ್ರದರ್ಶನಕ್ಕೆ ಆಗಮಿಸಿದ್ದರು ಎನ್ನಲಾಗಿದ್ದು, ಇದು ಅತಿಹೆಚ್ಚು ಪ್ರೇಕ್ಷಕರು ಸೇರಿದ ದಾಖಲೆ ಸ್ಥಾಪಿಸಿದೆ ಎಂದು ಹೇಳಲಾಗಿದೆ. ಪ್ರದರ್ಶನ ಮುಕ್ತಾಯಗೊಂಡ ಬಳಿಕ ದೊಡ್ಡ ಸಂಖ್ಯೆಯ ಜನ ಒಂದೇ ಬಾರಿಗೆ ಹೊರಹೋಗಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ ಕಾಲ್ತುಳಿತದಂಥ ಪರಿಸ್ಥಿತಿ ನಿರ್ಮಾಣವಾಗಿತ್ತು.
ಎಲ್ಲರೂ ಏಕಕಾಲಕ್ಕೆ ನಿರ್ಗಮನ ದ್ವಾರದತ್ತ ಆಗಮಿಸಿದ ಹಿನ್ನೆಲೆಯಲ್ಲಿ ಉಂಟಾದ ದಟ್ಟಣೆಯಿಂದ ಸುಮಾರು 40 ನಿಮಿಷಕಾಲ ಸುಡುಬಿಸಿಲಿನಲ್ಲಿ ಜನ ಸಿಕ್ಕಿಹಾಕಿಕೊಂಡರು. ಈ ಪರಿಸ್ಥಿತಿಯಿಂದ ಪಾರಾಗುವ ಪ್ರಯತ್ನದಲ್ಲಿ ಕೆಲವರು ಬ್ಯಾರಿಕೇಡ್ ಗಳನ್ನು ಮುರಿದು ಹೊರಬಂದರೆ, ಸ್ಥಳದಲ್ಲುಂಟಾದ ಗದ್ದಲದಲ್ಲಿ ಕೆಲ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾದವು.
ಆ್ಯಂಬುಲೆನ್ಸ್ ಗಳು ಕೂಡಾ 30 ನಿಮಿಷ ಕಾಲ ಸಿಕ್ಕಿಹಾಕಿಕೊಂಡವು. ಇದರಿಂದಾಗಿ ಅಸ್ವಸ್ಥರನ್ನು ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಗೆ ಸಾಗಿಸುವಲ್ಲಿ ವಿಳಂಬವಾಯಿತು. ಸುಮಾರು 50 ಆ್ಯಂಬುಲೆನ್ಸ್ ಗಳನ್ನು ಸೇವೆಗೆ ನಿಯೋಜಿಸಲಾಗಿದ್ದು, 20 ಆ್ಯಂಬುಲೆನ್ಸ್ಗಳನ್ನು ಬೀಚ್ ರಸ್ತೆಯಲ್ಲಿ ಇರಿಸಲಾಗಿತ್ತು. ಜನದಟ್ಟಣೆಯ ನಡುವೆ ಇವುಗಳನ್ನು ಚಾಲನೆ ಮಾಡುವುದು ಸವಾಲುದಾಯಕ ಎನಿಸಿತ್ತು.
ದೇಹದಲ್ಲಿ ನೀರಿನ ಅಂಶ ಕಡಿಮೆಯಾಗಿ ಅಸ್ವಸ್ಥಗೊಂಡ ಸುಮಾರು 230 ಮಂದಿಗೆ ಚಿಕಿತ್ಸೆ ನೀಡಲಾಗಿದೆ ಎಂದು ಮೂಲಗಳು ಹೇಳಿವೆ.