ಚತ್ತೀಸ್ಗಡ | ಪತ್ರಕರ್ತನ ಹತ್ಯೆ ; ಮೂವರು ಆರೋಪಿಗಳ ಬಂಧನ
ಪ್ರಧಾನ ಆರೋಪಿಯ ‘ಅಕ್ರಮ’ ಕಟ್ಟಡ ನೆಲಸಮ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ : ಸುಪ್ರೀಂ ಕೋರ್ಟ್ನ ಆದೇಶದ ಹೊರತಾಗಿಯೂ ಪತ್ರಕರ್ತ ಮುಖೇಶ್ ಚಂದ್ರಾಕರ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸುರೇಶ್ ಚಂದ್ರಾಕರ್ನ ‘‘ಕಾನೂನು ಬಾಹಿರ’’ ಸೊತ್ತನ್ನು ಜಿಲ್ಲಾಡಳಿತ ಶನಿವಾರ ನೆಲಸಮಗೊಳಿಸಿದೆ.
ಚತ್ತೀಸ್ಗಢದ ಬಿಜಾಪುರ ಜಿಲ್ಲೆಯಲ್ಲಿ 32 ವರ್ಷದ ಪತ್ರಕರ್ತ ಮುಕೇಶ್ ಚಂದ್ರಾಕರ್ ಅವರ ಮೃತದೇಹ ಸೆಪ್ಟಿಕ್ ಟ್ಯಾಂಕ್ನಲ್ಲಿ ಪತ್ತೆಯಾದ ಒಂದು ದಿನದ ಬಳಿಕ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಸಹೋದರರಾದ ರಿತೇಶ್ ಚಂದ್ರಾಕರ್, ದಿನೇಶ್ ಚಂದ್ರಾಕರ್ ಹಾಗೂ ಕಟ್ಟಡ ನಿರ್ಮಾಣದ ಮೇಲ್ವಿಚಾರಕ ಮಹೇಂದ್ರ ರಾಮ್ಟೆಕೆ ಎಂದು ಗುರುತಿಸಲಾಗಿದೆ. ಸುರೇಶ್ ಚಂದ್ರಾಕರ್ ತಲೆಮರೆಸಿಕೊಂಡಿದ್ದಾನೆ.
ಮುಖೇಶ್ನ ಸೋದರ ಸಂಬಂಧಿ ರಿತೇಶ್ ಕಟ್ಟಡ ನಿರ್ಮಾಣದ ಮೇಲ್ವಿಚಾರಕ ಮಹೇಂದ್ರ ರಾಮ್ಟೆಕೆಯ ಸಹಾಯದಿಂದ ಮುಖೇಶ್ ಅವರನ್ನು ಹತ್ಯೆಗೈದಿದ್ದಾನೆ. ತನ್ನ ಸಹೋದರರಾದ ದಿನೇಶ್ ಹಾಗೂ ಸುರೇಶ್ರ ನೆರವಿನಿಂದ ಮುಖೇಶ್ ಅವರ ಮೃತದೇಹವನ್ನು ವಿಲೇವಾರಿ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಸ್ತಾರ್ ವಲಯದ ಗಂಗಲೂರುನಿಂದ ಹಿರೋಲಿ ವರೆಗಿನ 120 ಕೋ.ರೂ. ವೆಚ್ಚದ ರಸ್ತೆ ನಿರ್ಮಾಣ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ಮುಖೇಶ್ ಇತ್ತೀಚೆಗೆ ಬಹಿರಂಗಪಡಿಸಿದ್ದರು. ಆರಂಭಿಕ ಟೆಂಡರ್ 50 ಕೋ.ರೂ.ಗಳಿಷ್ಟಿದ್ದ ಈ ಯೋಜನೆ ಕಾಮಗಾರಿಯ ವ್ಯಾಪ್ತಿಗೆ ಯಾವುದೇ ಬದಲಾವಣೆಗಳಿಲ್ಲದೆ 120 ಕೋ.ರೂ.ಗೆ ಏರಿತ್ತು. ಈ ಯೋಜನೆಯನ್ನು ಗುತ್ತಿಗೆದಾರ ಸುರೇಶ್ ಚಂದ್ರಾಕರ್ ನಿರ್ವಹಿಸುತ್ತಿದ್ದ.
ಮುಖೇಶ್ ಈ ಭ್ರಷ್ಟಾಚಾರವನ್ನು ಬಹಿರಂಗಗೊಳಿಸಿದ ಬಳಿಕ ರಾಜ್ಯ ಸರಕಾರ ತನಿಖೆ ಆರಂಭಿಸಿತ್ತು. ಇದು ಈ ವಲಯದ ಗುತ್ತಿಗೆದಾರರ ಲಾಬಿಯ ಕುರಿತು ಪ್ರಶ್ನೆಗಳನ್ನು ಎತ್ತಿತ್ತು.
ಸುರೇಶ್ ಚಂದ್ರಾಕರ್ ಅವರ ಸಹೋದರ ರಿತೇಶ್ ಗುತ್ತಿಗೆದಾರನೊಂದಿಗೆ ಮುಖೇಶ್ ಅವರ ಭೇಟಿಯನ್ನು ಜನವರಿ 1ರಂದು ಆಯೋಜಿಸಿದ್ದ. ಈ ಭೇಟಿಯ ಬಳಿಕ ಮುಖೇಶ್ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಮುಕೇಶ್ ನಾಪತ್ತೆಯಾಗಿದ್ದಾರೆ ಎಂದು ಆತನ ಹಿರಿಯ ಸಹೋದರ ಯುಕೇಶ್ ಚಂದ್ರಶೇಖರ್ ಪೊಲೀಸರಿಗೆ ದೂರು ನೀಡಿದ್ದರು.