ಛತ್ತೀಸ್ ಗಢ: ಸರಕಾರದ ಯೋಜನೆಯಡಿ ಸನ್ನಿ ಲಿಯೋನ್ ಹೆಸರು ನೋಂದಾಯಿಸಿ ಪ್ರತಿ ತಿಂಗಳು 1,000 ರೂ. ಪಡೆಯುತ್ತಿದ್ದ ವ್ಯಕ್ತಿ!
ಸನ್ನಿ ಲಿಯೋನ್ | PC : X
ರಾಯ್ಪುರ: ಆರ್ಥಿಕವಾಗಿ ದುರ್ಬಲರಾಗಿರುವ ವಿವಾಹಿತ ಮಹಿಳೆಯರಿಗಾಗಿ ಛತ್ತೀಸ್ ಗಢ ಸರಕಾರ ಜಾರಿಗೆ ತಂದಿರುವ ‘ಮಹತಾರಿ ವಂದನ್ ಯೋಜನಾ’ ಅಡಿ ನಟಿ ಸನ್ನಿ ಲಿಯೋನ್ ಹೆಸರಲ್ಲಿ ನೋಂದಾಯಿಸಿಕೊಂಡಿದ್ದ ವ್ಯಕ್ತಿಯೊಬ್ಬ, ಪ್ರತಿ ತಿಂಗಳು 1,000 ರೂ. ನೆರವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದದ್ದನ್ನು ಛತ್ತೀಸ್ ಗಢ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ. ಫಲಾನುಭವಿಯ ಹೆಸರನ್ನು ಸನ್ನಿ ಲಿಯೋನ್ ಎಂದು ನೋಂದಾಯಿಸಿರುವ ಆತ, ಅವರ ಪತಿಯ ಹೆಸರನ್ನು ವಯಸ್ಕ ಚಿತ್ರಗಳ ನಟ ಜಾನಿ ಸಿನ್ಸ್ ಎಂದು ದಾಖಲಿಸಿದ್ದಾನೆ. ತನಿಖೆಯ ಸಂದರ್ಭದಲ್ಲಿ, ಬಸ್ತಾರ್ ಜಿಲ್ಲೆಯ ವ್ಯಕ್ತಿಯೊಬ್ಬ ನಕಲಿ ದಾಖಲೆಗಳನ್ನು ಒದಗಿಸಿ, ಈ ಯೋಜನೆಯಡಿ ವಿವಾಹಿತ ಮಹಿಳೆಯರಿಗೆ ಪ್ರತಿ ತಿಂಗಳು ನೀಡಲಾಗುತ್ತಿರುವ 1,000 ರೂ. ನೆರವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದದ್ದು ಬೆಳಕಿಗೆ ಬಂದಿದೆ.
ಆರೋಪಿಯನ್ನು ವೀರೇಂದ್ರ ಜೋಶಿ ಎಂದು ಗುರುತಿಸಲಾಗಿದ್ದು, ಮಹತಾರಿ ವಂದನ್ ಯೋಜನೆಯಡಿ ನೋಂದಾಯಿಸಲು ವೇದಮತಿ ಜೋಶಿ ಎಂಬ ಅಂಗನವಾಡಿ ಕಾರ್ಯಕರ್ತೆಯ ನಕಲಿ ದಾಖಲೆಗಳನ್ನು ಆತ ಬಳಸಿಕೊಂಡಿದ್ದಾನೆ. ಆತ ನಕಲಿ ಖಾತೆಯ ಮೂಲಕ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಳ್ಳುತ್ತಿದ್ದ ಎಂದೂ ಹೇಳಲಾಗಿದೆ.
ದಾಖಲೆಗಳ ಪ್ರಕಾರ, ರವೀಂದ್ರ ಜೋಶಿ ಮಾರ್ಚ್ 2024ರಿಂದ ತನ್ನ ಖಾತೆಗೆ ಹಣ ವರ್ಗಾಯಿಸಿಕೊಳ್ಳುತ್ತಿರುವುದು ಕಂಡು ಬಂದಿದೆ.
ಅಧಿಕಾರಿಗಳು ಈ ಅಕ್ರಮವನ್ನು ಪತ್ತೆ ಹಚ್ಚಿದ ನಂತರ, ಈ ಕುರಿತು ತನಿಖೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಬಸ್ತಾರ್ ಜಿಲ್ಲಾಧಿಕಾರಿ ಹ್ಯಾರಿಸ್ ಎಸ್. ಸೂಚನೆ ನೀಡಿದ್ದಾರೆ. ಇದರೊಂದಿಗೆ, ಸಂಬಂಧಿತ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು, ದುರ್ಬಳಕೆ ಮಾಡಿಕೊಂಡಿರುವ ನಿಧಿಯನ್ನು ವಸೂಲಿ ಮಾಡಬೇಕು ಹಾಗೂ ಈ ವಂಚನೆಯಲ್ಲಿ ಭಾಗಿಯಾಗಿರುವವರ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳಬೇಕು ಎಂದೂ ಅವರು ನಿರ್ದೇಶನ ನೀಡಿದ್ದಾರೆ.
ಇದರ ಬೆನ್ನಿಗೇ, ಸರಕಾರಕ್ಕೆ ವಂಚಿಸಿದ ಆರೋಪದ ಮೇಲೆ ರವೀಂದ್ರ ಜೋಶಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಸಂಬಂಧಿತ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ವಸೂಲಿ ಪ್ರಕ್ರಿಯೆ ಪ್ರಾರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಲೋಪಕ್ಕೆ ಜವಾಬ್ದಾರರಾಗಿರುವ ವೇದಮತಿ ಜೋಶಿ ಹಾಗೂ ಮೇಲ್ವಿಚಾರಕರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಶಿಫಾರಸು ಮಾಡಲಾಗಿದೆ.
2024ರಿಂದ ಜಾರಿಗೆ ಬಂದಿರುವ ಮಹತಾರಿ ವಂದನ್ ಯೋಜನೆಯು 21 ವರ್ಷಕ್ಕಿಂತ ಮೇಲ್ಪಟ್ಟಿರುವ ವಿವಾಹಿತರು, ವಿಧವೆಯರು, ವಿಚ್ಛೇದಿತರು ಹಾಗೂ ಒಂಟಿ ಮಹಿಳೆಯರು ಸೇರಿದಂತೆ ಆರ್ಥಿಕವಾಗಿ ದುರ್ಬಲವಾಗಿರುವ ಮಹಿಳೆಯರಿಗೆ ಮಾಸಿಕ 1,000 ರೂ. ಆರ್ಥಿಕ ನೆರವು ನೀಡುವ ಗುರಿ ಹೊಂದಿದೆ.