ಲಾಕ್ ಡೌನ್ ನಂತರ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗಿದೆ: ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ
Photo: Twitter@NDTV
;ಲಾತೂರ್: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್ ಡೌನ್ ಹೇರಿದ ನಂತರ ರಾಜ್ಯದಲ್ಲಿ ಬಾಲ್ಯ ವಿವಾಹಗಳ ಸಂಖ್ಯೆ ಹೆಚ್ಚಾಗಿದೆ ಎಂದು ಮಹಾರಾಷ್ಟ್ರ ಮಹಿಳಾ ಆಯೋಗದ ಮುಖ್ಯಸ್ಥೆ ರೂಪಾಲಿ ಚಕಂಕರ್ ಹೇಳಿದ್ದಾರೆ.
ಸೋಮವಾರ ಇಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೂಪಾಲಿ ಚಕಂಕರ್’ ‘’ಲಾತೂರ್ ಒಂದರಲ್ಲೇ 37 ಬಾಲ್ಯ ವಿವಾಹಗಳನ್ನು ನಿಲ್ಲಿಸಲಾಗಿದ್ದು, ಈ ಎರಡು ಘಟನೆಗಳಿಗೆ ಸಂಬಂಧಿಸಿದಂತೆ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.
ಆದಾಗ್ಯೂ, ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಬಾಲ್ಯವಿವಾಹಗಳ ಕುರಿತ ಹೇಳಿಕೆಗೆ ಸಂಬಂಧಿಸಿದಂತೆ ಅವರು ಅಂಕಿ-ಅಂಶಗಳನ್ನು ಅಥವಾ ಕಾಲಮಿತಿಯನ್ನು ನೀಡಿಲ್ಲ.
ಬಾಲ್ಯವಿವಾಹಗಳನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಗ್ರಾಮಸಭೆಗಳು ನಿರ್ಣಯಗಳನ್ನು ಅಂಗೀಕರಿಸಬೇಕು ಹಾಗೂ ಮದುವೆಯ ಆಮಂತ್ರಣ ಪತ್ರಗಳನ್ನು ಮುದ್ರಿಸುವ ಘಟಕಗಳು ಸೇರಿದಂತೆ ಭಾಗಿಯಾಗಿರುವ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು.
ಮೊಬೈಲ್ ಫೋನ್ ಗಳು ಮತ್ತು ತಂತ್ರಜ್ಞಾನದ ಇತರ ಪ್ರಕಾರಗಳ ಆಗಮನವು ಪೋಷಕರು ಮತ್ತು ಮಕ್ಕಳ ನಡುವೆ "ಸಂವಹನ ಅಂತರ"ವನ್ನು ಸೃಷ್ಟಿಸಿದೆ, ಇದು ಹುಡುಗಿಯರು ಪ್ರೀತಿಯಲ್ಲಿ ಬೀಳಲು ಹಾಗೂ ಓಡಿಹೋಗಲು ಕಾರಣವಾಗಬಹುದು ಎಂದು ರೂಪಾಲಿ ಹೇಳಿದ್ದಾರೆ.