‘ಚೀನಾ ಟಿಬೆಟ್ ತೊರೆಯಲಿ’ | ದಿಲ್ಲಿಯಲ್ಲಿ ಚೀನಾದ ವಿರುದ್ದ ಟಿಬೆಟಿಯನ್ನರ ಪ್ರತಿಭಟನಾ ಮೆರವಣಿಗೆ
Photo: PTI
ಹೊಸದಿಲ್ಲಿ: ಚೀನಾದ ವಿರುದ್ಧ ಟಿಬೆಟಿಯನ್ ರಾಷ್ಟ್ರೀಯ ಬಂಡಾಯದ 65ನೇ ವರ್ಷಾಚರಣೆಯ ದಿನವಾದ ರವಿವಾರ ನೂರಾರು ದೇಶಭ್ರಷ್ಟ ಟಿಬೆಟಿಯನ್ನರು ಹೊಸದಿಲ್ಲಿಯಲ್ಲಿ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಸಂಸತ್ಭವನದ ಸಮೀಪ 300ಕ್ಕೂ ಅಧಿಕ ಟಿಬೆಟಿಯನ್ ನಿರಾಶ್ರಿತರು ‘‘ ಟಿಬೆಟ್ ಯಾವತ್ತೂ ಚೀನಾದ ಭಾಗವಾಗಿರಲಿಲ್ಲ’’ ಹಾಗೂ ‘‘ ಚೀನಾವು ಟಿಬೆಟ್ ತೊರೆಯಲಿ’’ ಎಂಬ ಘೋಷಣೆಯನ್ನು ಕೂಗಿದರು.
ಪ್ರತಿಭಟನಕಕಾರರು ಟಿಬೆಟಿಯನ್ ಧ್ವಜಗಳನ್ನು ಹಾಗೂ ತಮ್ಮ ಅಧ್ಯಾತ್ಮಿಕ ನಾಯಕ ದಲಾಯಿ ಲಾಲಾ ಅವರ ಛಾಯಾಚಿತ್ರಗಳನ್ನು ಹಿಡಿದುಕೊಂಡಿದ್ದರು.
ಹೊಸದಿಲ್ಲಿಯಲ್ಲಿ ಪ್ರತಿಭಟನಾ ಮೆರವಣಿಗೆಗಳನ್ನು ಆಯೋಜಿಸಿದ್ದ ಟಿಬೆಟನ್ ಯುವ ಕಾಂಗ್ರೆಸ್ ಹೇಳಿಕೆಯೊಂದನ್ನು ನೀಡಿ, 1959ರಲ್ಲಿ ಚೀನಾದ ಕಮ್ಯೂನಿಸ್ಟ್ ಆಡಳಿತವು ಟಿಬೆಟ್ ಅನ್ನು ಆಕ್ರಮಿಸಿಕೊಂಡಿದ್ದುದು, ಟಿಬೆಟಿಯನ್ನರು ಬಂಡಾಯವೇಳಲು ಕಾರಣವಾಯುತು ಎಂದವರು ಹೇಳಿದರು.
ಟಿಬೆಟನ್ನು ಆಕ್ರಮಿಸಿಕೊಂಡಾಗಿನಿಂದ ಚೀನಾದ ಕಮ್ಯೂನಿಸ್ಟ್ ಆಡಳಿತವು ಕ್ರೂರ ಕೃತ್ಯಗಳನ್ನು ಎಸುಗುತ್ತಿದೆ. ಇದರ ಪರಿಣಾಮವಾಗಿ ದಮನಕಾರಿ ಚೀನಾ ಆಳ್ವಿಕೆಯ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ 10 ಲಕ್ಷಕ್ಕೂ ಅಧಿಕ ಮಂದಿ ಟಿಬೆಟಿಯನ್ನರು ಸಾವನ್ನಪ್ಪಿದ್ದಾರೆ ’’ ಎಂದರು.
ಚೀನಾವು ಟಿಬೆಟ್ ಮೇಲೆ ಆಕ್ರಮಣ ನಡೆಸಿದ ಬಳಿಕ ಭಾರತದಲ್ಲಿ ಆಶ್ರಯ ಪಡೆದಿರುವ 88 ವರ್ಷ ವಯಸ್ಸಿನ ದಲಾಯಿಲಾಮಾ ಅವರು ಟಿಬೆಟ್ನ ಸ್ವಾಯತ್ತೆಗೆ ಆಗ್ರಹಿಸುತ್ತಿದ್ದಾರೆ ಹಾಗೂ ಟಿಬೆಟ್ನ ಮೂಲ ಬೌದ್ದ ಸಂಸ್ಕೃತಿಯ ಸಂರಕ್ಷಣೆಯನ್ನು ಪ್ರತಿಪಾದಿಸುತ್ತಿದ್ದಾರೆ.
ಟಿಬೆಟ್ ಚೀನಾದ ಭಾಗವೆಂದು ಭಾರತವು ಪರಿಗಣಿಸುತ್ತಿದೆಯಾದರೂ, ಟಿಬೆಟನ್ನರಿಗೆ ಆಶ್ರಯ ನೀಡುತ್ತಿದೆ.