ಚಿರಾಗ್ ಪಕ್ಷದ 22 ಮಂದಿ ಟಿಕೆಟ್ ವಂಚಿತರು 'ಇಂಡಿಯಾ' ತೆಕ್ಕೆಗೆ?
ಲೋಕ ಜನಶಕ್ತಿ ಪಕ್ಷದ ಅಧ್ಯಕ್ಷ ಚಿರಾಗ್ ಪಾಸ್ವಾನ್ Photo: PTI
ಪಾಟ್ನಾ: ಎನ್ ಡಿಎ ಮೈತ್ರಿಕೂಟದ ಭಾಗವಾಗಿರುವ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್)ಯ 22 ಮಂದಿ ಟಿಕೆಟ್ ವಂಚಿತ ಮುಖಂಡರು ಪಕ್ಷ ತೊರೆಯುವ ಎಚ್ಚರಿಕೆ ನೀಡಿದ್ದಾರೆ.
ಮಾಜಿ ಸಚಿವೆ ರೇಣು ಕುಶ್ವಾಹ, ಮಾಜಿ ಶಾಸಕ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್, ರಾಜ್ಯ ಸಂಘಟನಾ ಸಚಿವ ರವೀಂದ್ರ ಸಿಂಗ್, ಅಜಯ್ ಕುಶ್ವಾಹ, ಸಂಜಯ ಸಿಂಗ್ ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಡಾಂಗಿ ಪಕ್ಷದ ನಾಯಕತ್ವ ವಿರುದ್ಧ ಬಂಡೆದಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಟಿಕೆಟ್ ಮಾರಾಟ ಮಾಡಲಾಗಿದೆ ಎಂಬ ಆರೋಪ ಮಾಡಿರುವ ಈ ಮುಖಂಡರು ರಾಜೀನಾಮೆ ನೀಡಿದ್ದಾರೆ.
"ಹೊರಗಿನಿಂದ ಬಂದವರ ಬದಲಾಗಿ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕು. ಹೊರಗಿನಿಂದ ಬಂದವರಿಗೆ ಟಿಕೆಟ್ ನೀಡಿದರೆ, ಪಕ್ಷದಲ್ಲಿ ಸಮರ್ಥರು ಇಲ್ಲ ಎಂಬ ಸಂದೇಶವನ್ನು ನೀಡುತ್ತದೆ. ನಿಮ್ಮನ್ನು ಮುಖಂಡರಾಗಿ ಮಾಡಲು ನಿಮ್ಮ ಪರ ಕೆಲಸ ಮಾಡಿದ ನಾವು ನಿಮಗೆ ಕೂಲಿಗಳೇ? ಪಕ್ಷದಲ್ಲಿ ಕೂಲಿಗಳಾಗಿ ದುಡಿಯಲು ನಾವು ಸಿದ್ಧರಿಲ್ಲ" ಎಂದು ಮಾಜಿ ಸಂಸದೆ ರೇಣು ಕುಶ್ವಾಹ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.
ಪಕ್ಷದ ಜತೆ ಮುನಿಸಿಕೊಂಡಿರುವ ಮುಖಂಡರು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಲಿದ್ದಾರೆ ಎಂದು ಮಾಜಿ ಶಾಸಕ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸತೀಶ್ ಕುಮಾರ್ ಹೇಳಿಕೆ ನೀಡಿದ್ದಾರೆ.
"ದೇಶದಲ್ಲಿ ಪ್ರಮುಖ ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ಎಲ್ ಜೆ ಪಿ ನಾಯಕರು ಎಂಥವರಿಗೆ ಟಿಕೆಟ್ ನೀಡಿದ್ದಾರೆ ಎಂದು ನೋಡಿದರೆ ಕಾರ್ಯಕರ್ತರಿಗೆ ಆಘಾತವಾಗುತ್ತಿದೆ. ಹಗಲು ರಾತ್ರಿ ಚಿರಾಗ್ ಪಾಸ್ವಾನ್ ಪರ ಘೋಷಣೆ ಕೂಗಿದ ಕಾರ್ಯಕರ್ತರಿಗೆ ದ್ರೋಹ ಮಾಡಲಾಗಿದೆ. ಅವರ ಆಕಾಂಕ್ಷೆಗಳು ಛಿದ್ರಗೊಂಡಿವೆ. ಇದೀಗ ದೇಶವನ್ನು ಉಳಿಸುವ ಸಲುವಾಗಿ ನಾವು ಇಂಡಿಯಾ ಮೈತ್ರಿಕೂಟವನ್ನು ಬೆಂಬಲಿಸಲಿದ್ದೇವೆ" ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.