ಪೌರತ್ವ ಆಕಾಂಕ್ಷಿಗಳಿಗೆ ʼಮುಂಜಿ ಪರೀಕ್ಷೆʼ: ಬಿಜೆಪಿ ಮುಖಂಡನ ವಿವಾದಾತ್ಮಕ ಹೇಳಿಕೆ
Photo: fb.com/tathagata2
ಕೊಲ್ಕತ್ತಾ: ಪೌರತ್ವ ಬಯಸುವ ಪುರುಷರ ಧರ್ಮವನ್ನು ಪತ್ತೆ ಮಾಡಲು ಮುಂಜಿ ಪರೀಕ್ಷೆ ನಡೆಸುವುದನ್ನು ಕಡ್ಡಾಯ ಮಾಡಬೇಕು ಎಂದು ಬಿಜೆಪಿ ಮುಖಂಡ ತಥಾಗತ ರಾಯ್ ತಮ್ಮ ಎಕ್ಸ್ ಪೋಸ್ಟ್ ನಲ್ಲಿ ಹೇಳಿರುವುದು ರಾಜಕೀಯ ವಿವಾದಕ್ಕೆ ಕಾರಣವಾಗಿದೆ.
ಈ ಹೇಳಿಕೆಯನ್ನು ತೀರಾ ಅಶ್ಲೀಲಕರ ಎಂದು ಬಣ್ಣಿಸಿರುವ ಟಿಎಂಸಿ, ಇದು ಬಿಜೆಪಿ ಮುನ್ನಲೆಗೆ ತರಲು ಬಯಸಿರುವ ನಿರೂಪಣೆ ಎಂದು ಲೇವಡಿ ಮಾಡಿದೆ.
2014ಕ್ಕೆ ಮುನ್ನ ಅಫ್ಘಾನಿಸ್ತಾನ, ಬಾಂಗ್ಲಾದೇಶ ಮತ್ತು ಪಾಕಿಸ್ತಾನದಿಂದ ವಲಸೆ ಬಂದ ಹಿಂದೂ, ಸಿಕ್ಖ್, ಬೌದ್ಧ, ಜೈನ, ಪಾರ್ಸಿ ಮತ್ತು ಕ್ರೈಸ್ತ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವವನ್ನು ಮಂಜೂರು ಮಾಡಲು ಸಿಎಎ ಉದ್ದೇಶಿಸಿದೆ.
"ಬೇರೆ ದೇಶಗಳಿಂದ ಆಗಮಿಸಿದ ಹಿಂದೂ, ಬೌದ್ಧ ಅಥವಾ ಕ್ರಿಶ್ಚಿಯನ್ನರು ಪೌರತ್ವಕ್ಕೆ ಅರ್ಹರು. ಪೌರತ್ವ ಬಯಸುವ ಪುರುಷರ ಧರ್ಮದ ಸ್ಥಾನಮಾನದ ಪರೀಕ್ಷೆಗೆ ಸುನ್ನತಿ ಪರೀಕ್ಷೆ ಅಥವಾ ಇತರ ಪರೀಕ್ಷೆ ನಡೆಸಬೇಕು. ಹಿಂದೂ ಎಂದು ಕಂಡುಬರುವ ಪುರುಷರ ಜತೆಗೆ ಇರುವ ಮಹಿಳೆಯರೂ ಪೌರತ್ವಕ್ಕೆ ಅರ್ಹರು" ಎಂದು ರಾಯ್ ಅಭಿಪ್ರಾಯಪಟ್ಟಿದ್ದಾರೆ.
ಬಳಿಕ ಮಾತನಾಡಿದ ರಾಯ್, ಸಿಎಎಗೆ ಅರ್ಜಿ ಸಲ್ಲಿಸಿದ ವ್ಯಕ್ತಿಯ ಧರ್ಮವನ್ನು ಪತ್ತೆ ಮಾಡುವುದು ನಿಜವಾದ ಸವಾಲು. ಚಿತ್ರಹಿಂಸೆಯ ಕಾರಣದಿಂದ ಬಾಂಗ್ಲಾದೇಶದಿಂದ ವಲಸೆ ಬಂದಿರುವ ಹಿಂದೂ, ಭಾರತೀಯ ಪೌರತ್ವ ಪಡೆಯಲು ಹೇಗೆ ಸಾಧ್ಯ? ಧಾರ್ಮಿಕ ಕಿರುಕುಳದಿಂದ ವಲಸೆ ಬಂದಿರುವ ಹಿಂದೂ, ಬೌದ್ಧ ಅಥವಾ ಕ್ರೈಸ್ತರಿಗೆ ಸಿಎಎ ಅಡಿಯಲ್ಲಿ ಪೌರತ್ವ ನೀಡಲಾಗುತ್ತದೆ. ಅಂಥ ವ್ಯಕ್ತಿಗಳ ಧರ್ಮವನ್ನು ಪತ್ತೆ ಮಾಡಲು ಹೇಗೆ ಸಾಧ್ಯ? ಮುಂಜಿ ಪರೀಕ್ಷೆ ಒಂದು ವಿಧಾನ" ಎಂದು ಹೇಳಿದರು.