ಮಸೀದಿಗಳು ಮತ್ತು ದರ್ಗಾಗಳ ವಿರುದ್ಧ ಹಕ್ಕುವಾದಿಸುವುದರಿಂದ ದೇಶದ ಘನತೆಗೆ ಧಕ್ಕೆ: ಎ.ಪಿ. ಉಸ್ತಾದ್
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್
ಕೋಝಿಕ್ಕೋಡ್: ಮಸೀದಿಗಳು ಮತ್ತು ದರ್ಗಾಗಳ ವಿರುದ್ಧ ಹಕ್ಕುವಾದಿಸುವುದರಿಂದ ದೇಶದ ಜಾತ್ಯತೀತ ಪರಿಕಲ್ಪನೆ ಮತ್ತು ಏಕತೆಗೆ ಧಕ್ಕೆ ಉಂಟಾಗುತ್ತದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕರ್ ಮುಸ್ಲಿಯಾರ್ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಸದ್ಯ ಇರುವ ಸ್ಥಿತಿಯಲ್ಲಿ ಪ್ರಾರ್ಥನಾ ಮಂದಿರಗಳ ರಕ್ಷಣೆ ಹಾಗೂ ಕೋಮು, ಮತೀಯ ಚಿಂತನೆ ತೊಲಗಿಸಲು ರಾಜಕೀಯ ಪಕ್ಷಗಳು ಹಾಗೂ ಸರಕಾರ ಸಿದ್ಧರಾಗಬೇಕು ಎಂದರು.
ಅಜ್ಮೀರ್ ದರ್ಗಾ ಶತಮಾನಗಳಿಂದ ಭಾರತದ ಧಾರ್ಮಿಕ ಸಾಮರಸ್ಯ ಮತ್ತು ಸೂಫಿ ಸಂಪ್ರದಾಯದ ಸಂಕೇತವಾಗಿದೆ. ದರ್ಗಾದ ಅಡಿಯಲ್ಲಿ ದೇವಾಲಯವಿದೆ ಎಂಬ ಆಧಾರರಹಿತ ಹೇಳಿಕೆಯ ಹಿನ್ನೆಲೆಯಲ್ಲಿ ದರ್ಗಾ ಸಮಿತಿ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಕೇಂದ್ರ ಸರಕಾರಕ್ಕೂ ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯದ ಕ್ರಮ ಅತ್ಯಂತ ಕಳವಳಕಾರಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜ್ಞಾನವಾಪಿ ಮಸೀದಿ, ಮಥುರಾ ಶಾಹಿ ಈದ್ಗಾ, ಸಂಭಾಲ್ ಶಾಹಿ ಜುಮಾ ಮಸೀದಿ ಮತ್ತು ಅಜ್ಮೀರ್ ದರ್ಗಾ ಸೇರಿದಂತೆ ಮುಸ್ಲಿಂ ಆರಾಧನಾಲಯಗಳ ಮೇಲಿನ ಹಕ್ಕುವಾದ ಮತ್ತು ಇತರ ಕ್ರಮಗಳು ದೇಶದ ಸಾಮರಸ್ಯದ ವಾತಾವರಣ ಮತ್ತು ಒಗ್ಗಟ್ಟನ್ನು ಒಡೆಯುತ್ತವೆ. ಆರಾಧನಾ ಸ್ಥಳಗಳ ಸಂರಕ್ಷಣಾ ಕಾಯಿದೆ, 1991, ಪೂಜಾ ಸ್ಥಳಗಳಿಗೆ ಸಂಬಂಧಿಸಿದಂತೆ 1947 ರ ಯಥಾಸ್ಥಿತಿ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಿದೆಯಾದರೂ, ಇಂತಹ ಅಪಾಯಕಾರಿ ಘಟನೆಗಳು ಮರುಕಳಿಸದಂತೆ ನ್ಯಾಯಾಂಗ ಮತ್ತು ಕಾನೂನು ಜಾರಿ ಮಾಡುವವರು ಎಚ್ಚರವಹಿಸಬೇಕಾಗಿದೆ ಎಂದರು.
ಇಂತಹ ಘಟನೆಗಳು ದೇಶದಲ್ಲಿ ಕೋಮುವಾದದ ಸೃಷ್ಟಿಗೆ ಕಾರಣವಾಗುತ್ತವೆ. ಉತ್ತರ ಪ್ರದೇಶದ ಸಂಭಲ್ ನಲ್ಲಿ ನಡೆದ ಘಟನೆ ಇದಕ್ಕೆ ಸಾಕ್ಷಿ. ಆರಾಧನಾಲಯಗಳನ್ನು ಪ್ರಸ್ತುತ ಇರುವ ಸ್ಥಿತಿಯಲ್ಲಿ ಸಂರಕ್ಷಿಸಲು, ಭಾರತದ ಜಾತ್ಯತೀತ ಸ್ವರೂಪ ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಮತ್ತು ಕೋಮು ಮತ್ತು ವಿಘಟನೆಯ ಚಿಂತನೆಯನ್ನು ತೊಡೆದುಹಾಕಲು ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರಿಸಿರುವ ಎಲ್ಲಾ ರಾಜಕೀಯ ಪಕ್ಷಗಳು ಮತ್ತು ಸರಕಾರಗಳು ಮುಂದೆ ಬರಬೇಕಿದೆ ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಉಸ್ತಾದ್ ಹೇಳಿದರು.