ರವಿವಾರ ಮಹಾರಾಷ್ಟ್ರ ಕಾಂಗ್ರೆಸ್, ಎನ್‌ಸಿಪಿಯಿಂದ ಸಿಎಂ ಸಿದ್ದರಾಮಯ್ಯಗೆ ಸನ್ಮಾನ
ಬೆಂಗಳೂರು: ಕರ್ನಾಟಕದ ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಮತ್ತದರ ಮಿತ್ರ ಪಕ್ಷ ಎನ್‌ಸಿಪಿ ರವಿವಾರ ಸನ್ಮಾನಿಸಲಿದೆ. ಕಳೆದ ತಿಂಗಳ ಅಭೂತಪೂರ್ವ ಗೆಲುವಿಗೆ ಅಭಿನಂದನೆ ಸಲ್ಲಿಸಲು ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಿಂದ ರವಿವಾರ ಕೊಲ್ಲಾಪುರಕ್ಕೆ ವಿಮಾನ ಮೂಲಕ ತೆರಳಿ ಅಲ್ಲಿಂದ ಸಾಂಗ್ಲಿಗೆ ರಸ್ತೆ ಮೂಲಕ ಪ್ರಯಾಣಿಸಿ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಆಯೋಜಿಸಿರುವ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಅಲ್ಲಿಂದ ಅವರು ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಆಹ್ವಾನದ ಮೇರೆಗೆ ಬಾರಾಮತಿಯಲ್ಲಿ ಪುಣ್ಯಶ್ಲೋಕ್ ಅಹಿಲ್ಯಾದೇವಿ ಹೋಲ್ಕರ್ ವಿಕಾಸ್ ಪ್ರತಿಷ್ಠಾನ ಆಯೋಜಿಸುವ 18ನೇ ಶತಮಾನದ ಮರಾಠ ರಾಣಿ ಅಹಿಲ್ಯಾದೇವಿ ಹೋಲ್ಕರ್ ಅವರ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಅಲ್ಲಿಯೂ ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿದು ಬಂದಿದೆ.
ಶರದ್ ಪವಾರ್ ಅವರು ಸಿದ್ದರಾಮಯ್ಯಗೆ ಜೂನ್ 9ರಂದು ಪತ್ರ ಬರೆದು ಬಾರಾಮತಿಗೆ ಆಹ್ವಾನಿಸಿದ್ದರು. ಪುಣೆ ಜಿಲ್ಲೆಯಲ್ಲಿರುವ ಬಾರಾಮತಿ ಪವಾರ್ ಅವರ ತವರು ಕ್ಷೇತ್ರವಾಗಿದೆ. “ಕರ್ನಾಟಕದಲ್ಲಿ ವಿಧಾನಸಭಾ ಚುನಾವಣಾ ಫಲಿತಾಂಶ ಜಾತ್ಯತೀತ ಶಕ್ತಿಗಳ ಬಲವನ್ನು ಪ್ರದರ್ಶಿಸಿದೆ. ಅದರ ಪರಿಣಾಮ ಮಹಾರಾಷ್ಟ್ರದಲ್ಲೂ ಬೀರಿದ್ದು ಜನರು ನಿಮ್ಮನ್ನು ಸ್ವಾಗತಿಸಲು ಮತ್ತು ಸನ್ಮಾನಿಸಲು ಉತ್ಸುಕರಾಗಿದ್ದಾರೆ,” ಎಂದು ಪವಾರ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
ಸಿದ್ದರಾಮಯ್ಯ ಅವರನ್ನು ಸನ್ಮಾನಿಸಲು ತಮ್ಮನ್ನು ಸದಾ ಬೆಂಬಲಿಸುತ್ತಿರುವ ಧಂಗರ್ ಸಮುದಾಯ ನಿರ್ಧರಿಸಿದೆ. ಈ ಸಮುದಾಯ ಮತ್ತು ಮಹಾರಾಷ್ಟ್ರದ ಜನರ ಪರವಾಗಿ ಸಿದ್ದರಾಮಯ್ಯನವರನ್ನು ವೈಯಕ್ತಿಕವಾಗಿ ಆಮಂತ್ರಿಸುತ್ತಿದ್ದೇನೆ, ಎಂದು ಪವಾರ್ ತಮ್ಮ ಪತ್ರದಲ್ಲಿ ಹೇಳಿದ್ದಾರೆ.