ಮಧ್ಯಪ್ರದೇಶ | ಚುನಾವಣೆ ಬಳಿಕವೇ ಸಿಎಂ ಆಯ್ಕೆ: ಅಮಿತ್ ಶಾ
ಭೋಪಾಲ್: ಮಧ್ಯಪ್ರದೇಶ ವಿಧಾನಸಭಾ ಚುನಾವಣೆ ಫಲಿತಾಂಶ ಬಂದ ಬಳಿಕವಷ್ಟೇ ಮುಖ್ಯಮಂತ್ರಿ ಹುದ್ದೆಯ ಬಗ್ಗೆ ಭಾರತೀಯ ಜನತಾ ಪಕ್ಷ ನಿರ್ಧಾರ ಕೈಗೊಳ್ಳಲಿದೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಶಾ ಹೇಳಿಕೆಯೊಂದಿಗೆ, ಹಾಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಇದೇ ಹುದ್ದೆಯಲ್ಲಿ ಮುಂದುವರಿಯುತ್ತಾರೆಯೇ ಎನ್ನುವ ಪ್ರಶ್ನೆ ಹಾಗೆಯೇ ಉಳಿದಿದೆ.
ಬಹುಶಃ ಮುಂದಿನ ನವೆಂಬರ್ ನಲ್ಲಿ ನಡೆಯುವ ರಾಜ್ಯ ವಿಧಾನಸಭಾ ಚುನಾವಣೆಗೆ ಪಕ್ಷ ಈಗಾಗಲೇ ಪ್ರಚಾರ ಆರಂಭಿಸಿದ್ದರೂ, ಸಿಎಂ ಮುಖವನ್ನು ಬಿಂಬಿಸದೇ ಚುನಾವಣಾ ಕಣಕ್ಕೆ ಧುಮುಕುವ ಸಾಧ್ಯತೆ ಸ್ಪಷ್ಟವಾಗಿದೆ.
"ಶಿವರಾಜ್ ಸಿಂಗ್ ಮುಖ್ಯಮಂತ್ರಿ. ಈ ಹುದ್ದೆಗೆ ಯಾರು ಬರಬೇಕು ಎಂದು ನಿರ್ಧರಿಸುವುದು ಪಕ್ಷದ ಹೊಣೆ. ನಾವು ಆ ಬಗ್ಗೆ ನಿರ್ಧರಿಸುತ್ತೇವೆ" ಎಂದು ಚುನಾವಣೆಯಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡರೆ ಚೌಹಾಣ್ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಯೇ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಶಾ ಉತ್ತರಿಸಿದರು.
"ಶಿವರಾಜ್ ಸಿಂಗ್ ಮುಖ್ಯಮಂತ್ರಿ ಹಾಗೂ ನಾವು ಚುನಾವಣೆ ಎದುರಿಸುತ್ತಿದ್ದೇವೆ. ಪಕ್ಷ ತನ್ನ ಕೆಲಸ ಮಾಡುತ್ತದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಅವರ ನಾಯಕತ್ವದಲ್ಲಿ ಏನು ಕೆಲಸವಾಗಿದೆ ಎನ್ನುವುದನ್ನು ಜನರಿಗೆ ತಿಳಿಸುವಂತೆ ನಿಮ್ಮಲ್ಲಿ ಮನವಿ ಮಾಡುತ್ತೇನೆ. ಈ ಅಭಿವೃದ್ಧಿ ಚುನಾವಣೆಯ ಕಾರ್ಯಸೂಚಿಯಾಗಬೇಕು" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಗರೀಬ್ ಕಲ್ಯಾಣ್ ಮಹಾ ಅಭಿಯಾನದಲ್ಲಿ ಕಳೆದ ಎರಡು ದಶಕಗಳಲ್ಲಿ ರಾಜ್ಯ ಸರ್ಕಾರ ಸಾಧಿಸಿದ ಪ್ರಗತಿಪತ್ರವನ್ನು ಬಿಡುಗಡೆ ಮಾಡಿದ ಅವರು, ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿಯವರೇ ಮುಖ್ಯ ವ್ಯಕ್ತಿಯಾಗಿರುತ್ತಾರೆ ಎಂಬ ಸುಳಿವು ನೀಡಿದರು.