ಕರಾವಳಿ ಕಾವಲು ಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಹೃದಯಾಘಾತದಿಂದ ಮೃತ್ಯು
ಹೊಸದಿಲ್ಲಿ: ಭಾರತೀಯ ಕರಾವಳಿ ಕಾವಲು ಪಡೆಯ ಮುಖ್ಯಸ್ಥ ರಾಕೇಶ್ ಪಾಲ್ ಭಾನುವಾರ ಚೆನ್ನೈನಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಅಧಿಕಾರಿಯ ನಿಧನಕ್ಕೆ ಸಂತಾಪ ಸೂಚಿಸಿದ್ದು, ಮಹಾನಿರ್ದೇಶಕರಾಗಿದ್ದ ಪಾಲ್ ಅತ್ಯಂತ ಸಮರ್ಥ ಹಾಗೂ ಬದ್ಧತೆ ಹೊಂದಿದ್ದ ಅಧಿಕಾರಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.
"ಭಾರತೀಯ ಕರಾವಳಿ ಕಾವಲು ಪಡೆಯ ಮಹಾನಿರ್ದೇಶಕ ರಾಕೇಶ್ ಪಾಲ್ ಅವರ ಅಕಾಲಿಕ ನಿಧನದಿಂದ ತೀವ್ರ ದುಃಖವಾಗಿದೆ. ಅವರು ಸಮರ್ಥ ಮತ್ತು ಬದ್ಧತೆ ಹೊಂದಿದ್ದ ಅಧಿಕಾರಿಯಾಗಿದ್ದು, ಅವರ ನಾಯಕತ್ವದಲ್ಲಿ ಐಸಿಜಿ, ದೊಡ್ಡ ಸಾಧನೆಗಳನ್ನು ಮಾಡಿದ್ದು, ಅವರು ಭಾರತೀಯ ಸಾಗರ ಭದ್ರತೆಯನ್ನು ಬಲಿಷ್ಠಗೊಳಿಸಿದ್ದರು. ಅವರ ದುಃಖತಪ್ತ ಕುಟುಂಬಕ್ಕೆ ಸಾಂತ್ವನಗಳು" ಎಂದು ಸಿಂಗ್ ಹೇಳಿದ್ದಾರೆ.
ಕಳೆದ ವರ್ಷದ ಜುಲೈ 19ರಂದು ಅವರು ಐಸಿಜಿಯ 25ನೇ ಮಹಾನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡಿದ್ದರು. ರಕ್ಷಣಾ ಸಚಿವರನ್ನು ಐಸಿಜಿ ಕಾರ್ಯಕ್ರಮವೊಂದರಲ್ಲಿ ಭೇಟಿ ಮಾಡಬೇಕಿದ್ದ ರಾಕೇಶ್ ಅವರನ್ನು ಭಾನುವಾರ ಬೆಳಿಗ್ಗೆ ಅಸ್ವಸ್ಥತೆ ಕಾರಣದಿಂದ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿಧನದ ಸುದ್ದಿ ತಿಳಿಯುತ್ತಿದ್ದಂತೆ ರಾಜನಾಥ್ ಸಿಂಗ್ ಆಸ್ಪತ್ರೆಗೆ ಭೇಟಿ ನೀಡಿ, ಪಾಲ್ ಅವರಿಗೆ ಅಂತಿಮ ನಮನ ಸಲ್ಲಿಸಿದರು. ನಂತರ ಡಿಎಂಕೆ ಮುಖಂಡ ದಿವಂಗತ ಎಂ.ಕರುಣಾನಿಧಿಯವರ ಶತಮಾನೋತ್ಸವ ಸಂದರ್ಭದಲ್ಲಿ ಅವರ ಸ್ಮರಣಾರ್ಥ ನಾಣ್ಯ ಬಿಡುಗಡೆ ಮಾಡುವ ಕಾರ್ಯಕ್ರಮದಲ್ಲಿ ಸಿಂಗ್ ಪಾಲ್ಗೊಂಡರು.
ತಮ್ಮ 34 ವರ್ಷಗಳ ಸೇವಾವಧಿಯಲ್ಲಿ ರಾಕೇಶ್ ಅವರು ಹಲವು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದರು. ವಾಯವ್ಯ ವಿಭಾಗ ಕರಾವಳಿ ಕಾವಲು ಪಡೆಯ ಕಮಾಂಡರ್ ಆಗಿ, ನೀತಿ ಮತ್ತು ಯೋಜನಾ ವಿಭಾಗದ ಉಪ ಮಹಾನಿರ್ದೇಶಕರಾಗಿ, ಕೇಂದ್ರ ಕಚೇರಿಯಲ್ಲಿ ಹೆಚ್ಚುವರಿ ಮಹಾನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು.