ಕೊಕೇನ್ ಸೇವನೆ: ನಟಿ ರಾಕುಲ್ ಪ್ರೀತ್ ಸಿಂಗ್ ಸಹೋದರ ಬಂಧನ
ಅಮರ್ ಪ್ರೀತ್ ಸಿಂಗ್ PC:x.com/NewsOdisha69
ಹೈದರಾಬಾದ್: ಖ್ಯಾತ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಸಹೋದರ ಅಮನ್ ಪ್ರೀತ್ ಸಿಂಗ್ ಮತ್ತು ಇತರ ನಾಲ್ಕು ಮಂದಿಯನ್ನು ಕೊಕೇನ್ ಸೇವನೆ ಆರೋಪದಲ್ಲಿ ಹೈದರಾಬಾದ್ ನಲ್ಲಿ ಬಂಧಿಸಲಾಗಿದೆ.
"ಸುಮಾರು 35 ಲಕ್ಷ ರೂಪಾಯಿ ಮೌಲ್ಯದ 199 ಗ್ರಾಮ್ ಕೊಕೇನ್, ಎರಡು ಪಾಸ್ ಪೋರ್ಟ್ ಹಾಗೂ ಎರಡು ಬೈಕ್ ಗಳು, 10 ಮೊಬೈಲ್ ಫೋನ್ ಗಳನ್ನು, ಪೂರಕ ದಾಖಲೆಗಳ ಜತೆಗೆ ವಶಪಡಿಸಿಕೊಳ್ಳಲಾಗಿದೆ" ಎಂದು ನರಸಿಂಗಿಯ ಹೈದರ್ ಶಾಕೋಟ್ಲಾದ ಫ್ಲಾಟ್ ಮೇಲೆ ದಾಳಿ ನಡೆಸಿದ ಬಳಿಕ ಪೊಲೀಸರು ಪ್ರಕಟಿಸಿದ್ದಾರೆ.
ತೆಲಂಗಾಣದ ಮಾದಕ ವಸ್ತು ವಿರೊಧಿ ಬ್ಯೂರೊ, ಸೈಬರ್ ಪೊಲೀಸ್ ವಿಭಾಗದ ವಿಶೇಷ ಕಾರ್ಯಾಚರಣೆ ತಂಡಗಳು ಮತ್ತು ರಾಜೇಂದ್ರನಗರ ಪೊಲೀಸರು ಐದು ಮಂದಿ ಮಾದಕವಸ್ತು ಮಾರಾಟಗಾರರನ್ನು ಬಂಧಿಸಿದ್ದಾರೆ. ಇವರಲ್ಲಿ ಇಬ್ಬರು ನೈಜೀರಿಯಾದ ಪ್ರಜೆಗಳು ಸೇರಿದ್ದಾರೆ. ಇವರು ನಗರದ ಗಣ್ಯ ವ್ಯಕ್ತಿಗಳಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.
ಗ್ರಾಹಕರಲ್ಲಿ ಅಮನ್ ಸಿಂಗ್ ಕೂಡಾ ಸೇರಿದ್ದಾಗಿ ಪೊಲೀಸ್ ಆಯುಕ್ತ ಅವಿನಾಶ್ ಮೊಹಾಂತಿ ಹೇಳಿದ್ದಾರೆ. 13 ಗ್ರಾಹಕರ ಪೈಕಿ 5 ಮಂದಿಯನ್ನು ಬಂಧಿಸಲಾಗಿದ್ದು, ಎಲ್ಲ ಐದು ಮಂದಿಯೂ ಕೊಕೇನ್ ಸೇವಿಸಿರುವುದು ಪರೀಕ್ಷೆಯಲ್ಲಿ ದೃಢಪಟ್ಟಿದೆ. ಅನಿಖೇತ್, ಪ್ರಸಾದ್, ಅಮನ್, ಮಧು ಮತ್ತು ನಿಖಿಲ್ ಬಂಧಿತರು ಎಂದು ವಿವರಿಸಿದ್ದಾರೆ.