ಗೋ ಕಳ್ಳಸಾಗಣೆ ಶಂಕೆ: ಕಾಲೇಜು ವಿದ್ಯಾರ್ಥಿಯನ್ನು 30ಕಿ.ಮೀವರೆಗೆ ಬೆನ್ನಟ್ಟಿ ಗುಂಡಿಕ್ಕಿ ಹತ್ಯೆಗೈದ ದುಷ್ಕರ್ಮಿಗಳು
PC: x.com/AG_knocks
ಹರ್ಯಾಣ: ಗೋಕಳ್ಳ ಸಾಗಣೆ ಶಂಕಿಸಿ ಕಾರೊಂದನ್ನು ಬೆನ್ನಟ್ಟಿದ ಗೋರಕ್ಷಕರ ತಂಡವೊಂದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ 12ನೇ ತರಗತಿಯ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರ್ಯಾಣದ ಫರಿದಾಬಾದ್ನಲ್ಲಿ ನಡೆದಿದೆ.
ಆ. 23ರಂದು ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಐವರು ಸ್ವಘೋಷಿತ ಗೋರಕ್ಷಕರನ್ನು ಬಂಧಿಸಲಾಗಿದೆ. ಬಂಧಿತ ದುಷ್ಕರ್ಮಿಗಳನ್ನು ಅನಿಲ್ ಕೌಶಿಕ್, ವರುಣ್, ಕೃಷ್ಣ, ಆದೇಶ್ ಮತ್ತು ಸೌರಭ್ ಎಂದು ಗುರುತಿಸಲಾಗಿದೆ.
ಸಂತ್ರಸ್ತ ಆರ್ಯನ್ ಮಿಶ್ರಾ ಮತ್ತು ಆತನ ಸ್ನೇಹಿತರಾದ ಶಾಂಕಿ ಮತ್ತು ಹರ್ಷಿತ್ ಅವರನ್ನು ಜಾನುವಾರು ಕಳ್ಳಸಾಗಣೆದಾರರು ಎಂದು ಶಂಕಿಸಿ ಆರೋಪಿಗಳು ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯ ಹರಿಯಾಣದ ಗಧಪುರಿದಲ್ಲಿ ಸುಮಾರು 30 ಕಿ.ಮೀ ವರೆಗೆ ಅವರ ಕಾರನ್ನು ಹಿಂಬಾಲಿಸಿದ್ದಾರೆ.
ಮೂಲಗಳ ಪ್ರಕಾರ, ರೆನಾಲ್ಟ್ ಡಸ್ಟರ್ ಮತ್ತು ಟೊಯೊಟಾ ಫಾರ್ಚುನರ್ ಕಾರುಗಳಲ್ಲಿ ಕೆಲವು ಜಾನುವಾರು ಕಳ್ಳಸಾಗಣೆದಾರರು ಜಾನುವಾರುಗಳನ್ನು ಎತ್ತಿಕೊಂಡು ಹೋಗುತ್ತಿದ್ದಾರೆ ಎಂದು ದುಷ್ಕರ್ಮಿಗಳಿಗೆ ಯಾರೋ ಮಾಹಿತಿಯನ್ನು ನೀಡಿದ್ದಾರೆ. ಈ ಹಿನ್ನೆಲೆ ಗೋರಕ್ಷಕರು ಜಾನುವಾರು ಕಳ್ಳಸಾಗಾಣಿಕೆದಾರರನ್ನು ಹುಡುಕುತ್ತಿದ್ದಾಗ ಪಟೇಲ್ ಚೌಕ್ನಲ್ಲಿ ಡಸ್ಟರ್ ಕಾರನ್ನು ನೋಡಿ ಕಾರು ಚಾಲಕ ಹರ್ಷಿತ್ ಬಳಿ ಕಾರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಆರ್ಯನ್ ಮತ್ತು ಅವರ ಸ್ನೇಹಿತರು ಭಯದಿಂದ ಕಾರನ್ನು ನಿಲ್ಲಿಸಲಿಲ್ಲ. ಈ ವೇಳೆ ಆರೋಪಿಗಳು ಕಾರಿನತ್ತ ಗುಂಡು ಹಾರಿಸಿದ್ದಾರೆ. ಗುಂಡು ಆರ್ಯನ್ ಕುತ್ತಿಗೆಗೆ ತಗುಲಿದೆ. ಬಳಿಕ ಕಾರನ್ನು ನಿಲ್ಲಿಸಿದರೂ ದುಷ್ಕರ್ಮಿಗಳು ಆರ್ಯನ್ ಮೇಲೆ ಮತ್ತೆ ಗುಂಡಿನ ದಾಳಿಯನ್ನು ನಡೆಸಿದ್ದಾರೆ. ತಕ್ಷಣ ಆರ್ಯನ್ಗೆ ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಗುಂಡಿನ ದಾಳಿಯ ನಂತರ ಆರೋಪಿಗಳು ಕಾರಿನಲ್ಲಿ ಇಬ್ಬರು ಮಹಿಳೆಯರು ಕುಳಿತಿರುವುದನ್ನು ನೋಡಿದ್ದು, ತಪ್ಪಾದ ವ್ಯಕ್ತಿಗೆ ಗುಂಡಿ ಹಾರಿಸಿದ್ದೇವೆ ಎಂದು ತಿಳಿದು ಸ್ಥಳದಿಂದ ಪರಾರಿಯಾಗಿದ್ದಾರೆ. ಬಳಿಕ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಈ ಕುರಿತು ಹೆಚ್ಚಿನ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.