ದಿಲ್ಲಿ, ರಾಜಸ್ಥಾನ, ಗುವಾಹಟಿ ಹೈಕೋರ್ಟ್ ಸಿಜೆಗಳ ಬಡ್ತಿಗೆ ಕೊಲಿಜಿಯಂ ಶಿಫಾರಸ್ಸು

ಸುಪ್ರೀಂ ಕೋರ್ಟ್ (PTI)
ಹೊಸದಿಲ್ಲಿ: ದಿಲ್ಲಿ, ರಾಜಸ್ಥಾನ ಮತ್ತು ಗುವಾಹಟಿ ಹೈಕೋರ್ಟ್ ಗಳ ಮುಖ್ಯ ನ್ಯಾಯಮೂರ್ತಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ್ ಚಂದ್ರ ಶರ್ಮಾ, ಅಗಸ್ಟೀನ್ ಜಾರ್ಜ್ ಮಸಿಹ್ ಮತ್ತು ಸಂದೀಪ್ ಮೆಹ್ತಾ ಅವರನ್ನು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳನ್ನಾಗಿ ನೇಮಕ ಮಾಡಲು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಐದು ಮಂದಿ ಸದಸ್ಯರ ಸುಪ್ರೀಂಕೋರ್ಟ್ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ.
ಸಿಜೆಐ ಜತೆಗೆ ನ್ಯಾಯಮೂರ್ತಿಗಳಾದ ಎಸ್.ಕೆ.ಕೌಲ್, ಸಂಜೀವ್ ಖನ್ನಾ, ಭೂಷಣ್ ಆರ್.ಗವಾಯಿ ಹಾಗೂ ಸೂರ್ಯಕಾಂತ ಈ ಕೊಲಾಜಿಯಂನಲ್ಲಿದ್ದಾರೆ. "ಅರ್ಹ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಮತ್ತು ಹಿರಿಯ ನ್ಯಾಯಮೂರ್ತಿಗಳ ಪ್ರತಿಭೆ, ನಿಷ್ಠೆ ಮತ್ತು ದಕ್ಷತೆಯನ್ನು ಅತ್ಯಂತ ಜಾಗರೂಕವಾಗಿ ಮೌಲ್ಯಮಾಪನ ನಡೆಸಿ, ಹಲವು ಬಹುತ್ವವನ್ನು ಪರಿಗಣಿಸಿ ಈ ಶಿಫಾರಸ್ಸು ಮಾಡಲಾಗಿದೆ" ಎಂದು ಕೊಲಿಜಿಯಂ ಸ್ಪಷ್ಟಪಡಿಸಿದೆ.
ಸುಪ್ರೀಂಕೋರ್ಟ್ ನಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಒಟ್ಟು 34 ನ್ಯಾಯಮೂರ್ತಿ ಹುದ್ದೆಗಳಿವೆ. ಈ ಪೈಕಿ 31 ಹುದ್ದೆಗಳು ಈಗ ಭರ್ತಿಯಾಗಿವೆ. ದೊಡ್ಡ ಸಂಖ್ಯೆಯ ಬಾಕಿ ಪ್ರಕರಣಗಳು ಇರುವ ಹಿನ್ನೆಲೆಯಲ್ಲಿ, ನ್ಯಾಯಮೂರ್ತಿಗಳ ಒತ್ತಡ ಹೆಚ್ಚುತ್ತಿದೆ. ಈ ಹಿನ್ನೆಲೆಯಲ್ಲಿ ಪೂರ್ಣ ಬಲದೊಂದಿಗೆ ಸುಪ್ರೀಂಕೋರ್ಟ್ ಕಾರ್ಯನಿರ್ವಹಿಸುವುದು ಅಗತ್ಯ. ಯಾವುದೇ ಹಂತದಲ್ಲಿ ಯಾವುದೇ ಖಾಲಿ ಹುದ್ದೆಗಳು ಇಲ್ಲದಂತೆ ನೋಡಿಕೊಳ್ಳಬೇಕು ಎಂದು ಕೊಲಿಜಿಯಂ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿ ಶರ್ಮಾ ಕಳೆದ ವರ್ಷದ ಜೂನ್ 28ರಂದು ದೆಹಲಿ ಹೈಕೋರ್ಟ್ ಸಿಜೆ ಆಗಿ ವರ್ಗಾವಣೆಗೊಂಡಿದ್ದರು. ಹೈಕೋರ್ಟ್ ನ್ಯಾಯಮೂರ್ತಿಗಳ ಅಖಿಲ ಭಾರತ ಮಟ್ಟದ ಜ್ಯೇಷ್ಠತೆಯಲ್ಲಿ ಅವರು ಎರಡನೇ ಸ್ಥಾನದಲ್ಲಿದ್ದಾರೆ. ಈ ತಿಂಗಳ 30ರಂದು ರಾಜಸ್ಥಾನ ಹೈಕೋರ್ಟ್ ಸಿಜೆ ಆಗಿ ನ್ಯಾಯಮೂರ್ತಿ ಮಸಿಹ್ ಬಡ್ತಿ ಪಡೆದಿದ್ದರು. ನ್ಯಾಯಮೂರ್ತಿ ಮೆಹ್ತಾ 2011ರಲ್ಲಿ ರಾಜಸ್ಥಾನ ಹೈಕೋರ್ಟ್ಗೆ ನೇಮಕಗೊಂಡಿದ್ದರು ಹಾಗೂ 2023ರ ಫೆಬ್ರುವರಿ 15ರಂದು ಗುವಾಹತಿ ಹೈಕೋರ್ಟ್ ಸಿಜೆ ಆಗಿ ನೇಮಕಗೊಂಡಿದ್ದರು.