ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಕೊನೆಯ ದಿನ ನಾಮಪತ್ರ ಸಲ್ಲಿಸಿದ ಕಾಮಿಡಿಯನ್ ಶ್ಯಾಮ್ ರಂಗೀಲಾ
PC : X/@ShyamRangeela
ವಾರಣಾಸಿ : ಕಾಮಿಡಿಯನ್ ಶ್ಯಾಮ್ ರಂಗೀಲಾ ಅವರು ಮಂಗಳವಾರ ಪಕ್ಷೇತರ ಅಭ್ಯರ್ಥಿಯಾಗಿ ಕೊನೆಗೂ ನಾಮಪತ್ರ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅವರಿಗೆ ಅಧಿಕೃತ ಅವಕಾಶ ದೊರೆತಿದೆ.
ಏಳನೇ ಹಂತದ ಲೋಕಸಭಾ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದ ಮೇ 14ರಂದೇ, ಶ್ಯಾಮ್ ರಂಗೀಲಾ ಅವರಿಗೆ ನಾಮಪತ್ರ ಸಲ್ಲಿಸಲು ಅವಕಾಶ ಸಿಕ್ಕಿದೆ.
ನಾಮಪತ್ರ ಸಲ್ಲಿಸಿರುವ ಸಂತಸದಲ್ಲಿ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಮೆಡಿಯನ್ ಶ್ಯಾಮ್ ರಂಗೀಲಾ, “ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ನಿಯಮಾನುಸಾರವಾಗಿ ಎಲ್ಲಾ ಅವಶ್ಯಕತೆಗಳನ್ನು ಪೂರೈಸಿ ನಾಮಪತ್ರ ಸಲ್ಲಿಸಿದ್ದೇನೆ. ಈ ದೇಶದ ಪ್ರಜಾಪ್ರಭುತ್ವದ ಮೇಲೆ ನನಗಿನ್ನೂ ಸಂಪೂರ್ಣ ನಂಬಿಕೆ ಇದೆ. ಈಗ ಮುಂದಿನ ಎರಡು-ಮೂರು ದಿನಗಳು ಮಹತ್ವದ್ದಾಗಿದೆ. ಸಹಕಾರಕ್ಕಾಗಿ ನಿಮ್ಮೆಲ್ಲರಿಗೂ ತುಂಬಾ ಧನ್ಯವಾದಗಳು. ನನ್ನ ಚುನಾವಣಾ ಭವಿಷ್ಯವೀಗ ನಮ್ಮ ಪ್ರಜಾಪ್ರಭುತ್ವದ ಕಾವಲುಗಾರರಾಗಿರುವ ಎಲ್ಲಾ ಚುನಾವಣಾ ಅಧಿಕಾರಿಗಳ ಕೈಯಲ್ಲಿದೆ. ಅವರೆಲ್ಲರೂ ನಮ್ಮ ನಂಬಿಕೆಯನ್ನು ಬಲಪಡಿಸುತ್ತಾರೆ ಎಂಬ ಭರವಸೆಯೊಂದಿಗೆ, ನಿಮ್ಮ ಶ್ಯಾಮ್ ರಂಗೀಲಾ“ ಎಂದು ಪೋಸ್ಟ್ ಮಾಡಿದ್ದಾರೆ.
ಕೊನೆಯ ದಿನ ನಾಮಪತ್ರ ಸಲ್ಲಿಸಿದವರು
ಕೊನೆಯ ದಿನವಾದ ಮಂಗಳವಾರ ಬಿಜೆಪಿ ಅಭ್ಯರ್ಥಿ ನರೇಂದ್ರ ಮೋದಿ, ಲೋಗ್ ಪಾರ್ಟಿಯ ವಿನಯ್ ಕುಮಾರ್ ತ್ರಿಪಾಠಿ, ಬಿಜೆಪಿಯ ಸುರೇಂದ್ರ ನಾರಾಯಣ್ ಸಿಂಗ್, ಪಕ್ಷೇತರ ಅಭ್ಯರ್ಥಿಗಳಾದ ದಿನೇಶ್ ಕುಮಾರ್ ಯಾದವ್, ರೀನಾ ರೈ, ನೇಹಾ ಜೈಸ್ವಾಲ್, ಅಜಿತ್ ಕುಮಾರ್ ಜೈಸ್ವಾಲ್, ಅಶೋಕ್ ಕುಮಾರ್ ಪಾಂಡೆ, ಸಂದೀಪ್ ತ್ರಿಪಾಠಿ ನಾಮಪತ್ರ ಸಲ್ಲಿಸಿದರು.
ವಾರಣಾಸಿ ಕ್ಷೇತ್ರಕ್ಕೆ 41 ಅಭ್ಯರ್ಥಿಗಳಿಂದ ನಾಮಪತ್ರ
ಮಂಗಳವಾರ ನಾಮಪತ್ರ ಸಲ್ಲಿಸಿದವರಲ್ಲದೇ, ಅಖಿಲ ಭಾರತೀಯ ಪರಿವಾರ ಪಕ್ಷದ ಹರ್ಪ್ರೀತ್ ಸಿಂಗ್, ಪಕ್ಷೇತರ ಅಭ್ಯರ್ಥಿ ನರಸಿಂಗ್, ಮೂಲಭೂತ ಹಕ್ಕುಗಳ ಪಕ್ಷದ ಸಂತೋಷ್ ಕುಮಾರ್ ಶರ್ಮಾ, ಮಾನವತಾ ಭಾರತ್ ಪಕ್ಷದ ಹೇಮಂತ್ ಕುಮಾರ್ ಯಾದವ್, ರಾಷ್ಟ್ರ ಉದಯ್ ಪಕ್ಷದ ಸುರೇಶ್ ಪಾಲ್, ಪಕ್ಷೇತರ ಅಭ್ಯರ್ಥಿ ರಾಮ್ಕುಮಾರ್ ಜೈಸ್ವಾಲ್, ಗಾಂಧಿಯನ್ ಪೀಪಲ್ಸ್ನ ಯಶವಂತ್ ಕುಮಾರ್ ಗುಪ್ತಾ ಪಕ್ಷ, ನಿತ್ಯಾನಂದ ಪಾಂಡೆ, ಅಮಿತ್ ಕುಮಾರ್, ಜನಹಿತ್ ಕಿಸಾನ್ ಪಕ್ಷದ ವಿಜಯ್ ನಂದನ್, ಭಾರತೀಯ ರಾಷ್ಟ್ರೀಯ ಸಮಾಜ ಪಕ್ಷದ ಸುನೀಲ್ ಕುಮಾರ್, ತುಷಾ ಮಿತ್ತಲ್, ವಿಕ್ರಮ್ ಕುಮಾರ್ ವರ್ಮಾ, ಪೀಸ್ ಪಾರ್ಟಿಯ ಪರ್ವೇಜ್ ಖಾದಿರ್ ಖಾನ್, ಪಕ್ಷೇತರ ಯೋಗೇಶ್ ಕುಮಾರ್ ಶರ್ಮಾ, ವಂಚಿತ್ ಇನ್ಸಾಫ್ ಪಕ್ಷದ ವೇದಪಾಲ್ ಶಾಸ್ತ್ರಿ ಮತ್ತು ಪಕ್ಷೇತರ ಅಭ್ಯರ್ಥಿ ಸುರೇಂದ್ರ ರೆಡ್ಡಿ ಸೇರಿದಂತೆ ಒಟ್ಟು 27 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ವಾರಣಾಸಿ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಸಂಖ್ಯೆ 41ಕ್ಕೆ ಏರಿಕೆಯಾಗಿದೆ.
ಚುನಾವಣಾ ಪ್ರಕ್ರಿಯೆಯಡಿಯಲ್ಲಿ ನಾಮಪತ್ರಗಳ ಪರಿಶೀಲನೆಗೆ ಮೇ 15 ಕೊನೆಯ ದಿನವಾಗಿದ್ದು, ಮೇ 17 ರಂದು ಮಧ್ಯಾಹ್ನ 3 ಗಂಟೆಯವರೆಗೆ ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕವಾಗಿದೆ. ವಾರಣಾಸಿ ಕ್ಷೇತ್ರಕ್ಕೆ ಜೂನ್ 1 ರಂದು ಕೊನೆಯ ಹಂತದಲ್ಲಿ ಮತದಾನ ನಡೆಯಲಿದೆ.