ಅದಾನಿ ಗ್ರೂಪ್ ವಿರುದ್ಧ ಹೊಸ ಆರೋಪ ; ನೆಲಕ್ಕಚ್ಚಿದ ಕಂಪನಿಗಳ ಶೇರುಗಳು
PHOTO : PTI
ಮುಂಬೈ: ಹಿಂಡನ್ಬರ್ಗ್ ವರದಿಯಿಂದಾಗಿ ಭಾರೀ ಹೊಡೆತ ತಿಂದಿದ್ದ ಗೌತಮ್ ಅದಾನಿಯವರ ಅದಾನಿ ಗ್ರೂಪ್ ಈಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ. ಅದಾನಿ ಗ್ರೂಪ್ ಕೃತಕವಾಗಿ ತನ್ನ ಕಂಪನಿಗಳ ಶೇರುಗಳ ಬೆಲೆಗಳನ್ನು ಹೆಚ್ಚಿಸಿದೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ಯೋಜನೆ (ಒಸಿಸಿಆರ್ಪಿ)ಯು ಗುರುವಾರ ಆರೋಪಿಸಿದ್ದು, ಭಾರತೀಯ ಶೇರು ಮಾರುಕಟ್ಟೆಗಳಲ್ಲಿ ಭಾರೀ ಕೋಲಾಹಲ ಸೃಷ್ಟಿಯಾಗಿದೆ. ಅದಾನಿ ಕುಟುಂಬವು ಅಪಾರದರ್ಶಕ ಮಾರಿಷಸ್ ನಿಧಿಗಳ ಮೂಲಕ ತನ್ನದೇ ಕಂಪನಿಗಳಲ್ಲಿ ಕೋಟ್ಯಂತರ ಡಾಲರ್ಗಳನ್ನು ಹೂಡಿಕೆ ಮಾಡಿದೆ ಎಂದು ಒಸಿಸಿಆರ್ಪಿ ಆರೋಪಿಸಿದೆ.
ಮಾರಿಷಸ್ ನಿಧಿಗಳ ಮೂಲಕ ಅದಾನಿ ಗ್ರೂಪ್ ಕಂಪನಿಗಳಲ್ಲಿ ರಹಸ್ಯ ಹೂಡಿಕೆಯಲ್ಲಿ ಗೌತಮ ಅದಾನಿಯವರ ಹಿರಿಯ ಸೋದರ ವಿನೋದ್ ಅದಾನಿ ಅವರ ಪಾತ್ರವನ್ನೂ ಒಸಿಸಿಆರ್ಪಿ ವರದಿಯು ಎತ್ತಿ ತೋರಿಸಿದೆ. ಈ ವರ್ಷದ ಜನವರಿಯಲ್ಲಿ ಅಮೆರಿಕದ ಹೂಡಿಕೆ ಸಂಸ್ಥೆ ಹಿಂಡನ್ಬರ್ಗ್ ರೀಸರ್ಚ್ ಅದಾನಿ ಗ್ರೂಪ್ ವಿರುದ್ಧ ಕೃತಕವಾಗಿ ಶೇರುಗಳ ಬೆಲೆಗಳನ್ನು ಹೆಚ್ಚಿಸಿದ್ದ ಇಂತಹುದೇ ಆರೋಪ ಮಾಡಿತ್ತು ಎನ್ನುವುದನ್ನು ಇಲ್ಲಿ ಗಮನಿಸಬಹುದು.
ಒಸಿಸಿಆರ್ಪಿ ಒದಗಿಸಿರುವ ಹೊಸ ದಾಖಲೆಗಳು ಅದಾನಿ ಗ್ರೂಪ್ನೊಂದಿಗೆ ನಿಕಟ ನಂಟು ಹೊಂದಿರುವ ಚಾಂಗ್ ಚುಂಗ್-ಲಿಂಗ್ ಮತ್ತು ನಾಸೀರ್ ಅಲಿ ಶಬಾನ್ ಅಹ್ಲಿ ಅವರು ಪ್ರಮುಖ ಹೂಡಿಕೆದಾರರಾಗಿದ್ದಾರೆ ಎಂದು ಬಹಿರಂಗಗೊಳಿಸಿವೆ.
ರಹಸ್ಯ ವಿದೇಶಿ ಹೂಡಿಕೆದಾರರನ್ನು ಹೊಂದಿರುವುದಾಗಿ ಒಸಿಸಿಆರ್ಪಿ ಆರೋಪಗಳನ್ನು ತಿರಸ್ಕರಿಸಿರುವ ಅದಾನಿ ಗ್ರೂಪ್,ಇದು ಯಾವುದೇ ತಿರುಳನ್ನು ಹೊಂದಿರದಿದ್ದ ಹಿಂಡನ್ಬರ್ಗ್ ವರದಿಗೆ ಮರುಜೀವ ನೀಡಲು ವಿದೇಶಿ ಮಾಧ್ಯಮಗಳ ಒಂದು ವರ್ಗದಿಂದ ಬೆಂಬಲಿತ, ಸೊರೊಸ್ನಿಂದ ಹಣಕಾಸು ಪಡೆದಿರುವ ಹಿತಾಸಕ್ತಿಗಳ ಇನ್ನೊಂದು ಸಂಘಟಿತ ಪ್ರಯತ್ನವಾಗಿದೆ ಎಂದು ಹೇಳಿದೆ.
ಅದಾನಿ ಗ್ರೂಪ್ನ ನಿರಾಕರಣೆಯ ಹೊರತಾಗಿಯೂ ಕಡಲಾಚೆಯ ಹೂಡಿಕೆಗಳ ಕುರಿತು ಒಸಿಸಿಆರ್ಪಿ ವರದಿಯು ಅದಾನಿ ಕಂಪನಿಗಳ ಶೇರುಗಳಿಗೆ ಭಾರೀ ಹಿನ್ನಡೆಯನ್ನುಂಟು ಮಾಡಿದೆ. ಗುರುವಾರ ಬೆಳಿಗ್ಗೆ ಮಾರುಕಟ್ಟೆ ಆರಂಭಗೊಂಡ ಬೆನ್ನಿಗೇ ಎಲ್ಲ ಅದಾನಿ ಗ್ರೂಪ್ ಶೇರುಗಳು ತೀವ್ರವಾಗಿ ಕುಸಿದಿದ್ದವು.
ಅಪರಾಹ್ನ 2:30ಕ್ಕೆ ಇದ್ದಂತೆ ಅದಾನಿ ಎಂಟರ್ಪ್ರೈಸಸ್ ಶೇ.3.15,ಅದಾನಿ ಗ್ರೀನ್ ಶೇ.3.40,ಅದಾನಿ ಪವರ್ ಶೇ.2.10,ಅದಾನಿ ಟೋಟಲ್ ಗ್ಯಾಸ್ ಶೇ.2.63,ಅದಾನಿ ವಿಲ್ಮರ್ ಶೇ.2.22,ಅಂಬುಜಾ ಸಿಮೆಂಟ್ಸ್ ಶೇ.4.10,ಅದಾನಿ ಟ್ರಾನ್ಸ್ಮಿಷನ್ 2.70, ಎನ್ಡಿಟಿವಿ ಶೇ.1.96,ಎಸಿಸಿ ಶೇ.1.65 ಮತ್ತು ಅದಾನಿ ಪೋರ್ಟ್ಸ್ ಶೇ.3.36ರಷ್ಟು ನಷ್ಟದಲ್ಲಿದ್ದವು.
ಒಸಿಸಿಆರ್ಪಿ ಆರೋಪವೇನು?
ಪ್ರವರ್ತಕ ಕುಟುಂಬದ ಪಾಲುದಾರರು ಮಾರಿಷಸ್ ಮೂಲದ ಅಪಾರದರ್ಶಕ ಹೂಡಿಕೆ ನಿಧಿಗಳ ಮೂಲಕ ಮಿಲಿಯಗಟ್ಟಲೆ ಡಾಲರ್ಗಳನ್ನು ಸಾರ್ವಜನಿಕವಾಗಿ ವಹಿವಾಟಾಗುತ್ತಿರುವ ಅದಾನಿ ಗ್ರೂಪ್ ಶೇರುಗಳಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಒಸಿಸಿಆರ್ಪಿ ಆರೋಪಿಸಿದೆ.
ಜಾರ್ಜ್ ಸೊರೊಸ್ ಮತ್ತು ರಾಕ್ಫೆಲರ್ ಫಂಡ್ನಂತಹವರ ಧನಸಹಾಯ ಹೊಂದಿರುವ ಒಸಿಸಿಆರ್ಪಿಯ ಹೊಸ ಆರೋಪಗಳು ಹಿಂಡನ್ಬರ್ಗ್ ವರದಿ ಬಿಡುಗಡೆಯ ಸುಮಾರು ಏಳು ತಿಂಗಳುಗಳ ನಂತರ ಹೊರಬಿದ್ದಿವೆ.
ಬಹು ತೆರಿಗೆ ಸ್ವರ್ಗಗಳು ಮತ್ತು ಅದಾನಿ ಗ್ರೂಪ್ ಇ-ಮೇಲ್ ಫೈಲ್ಗಳ ಪರಿಶೀಲನೆಯನ್ನು ಉಲ್ಲೇಖಿಸಿರುವ ಒಸಿಸಿಆರ್ಪಿ, ನಿಗೂಢ ಹೂಡಿಕೆದಾರರು ಕಡಲಾಚೆಯ ಇಂತಹ ಕಂಪನಿಗಳ ಮೂಲಕ ಅದಾನಿ ಶೇರುಗಳನ್ನು ಖರೀದಿಸಿ ಮಾರಾಟ ಮಾಡಿದ ಕನಿಷ್ಠ ಎರಡು ಪ್ರಕರಣಗಳು ತನ್ನ ತನಿಖೆಯಲ್ಲಿ ಪತ್ತೆಯಾಗಿವೆ ಎಂದು ಹೇಳಿದೆ. ತನ್ನ ವಿರುದ್ಧದ ಎಲ್ಲ ಹೊಸ ಆರೋಪಗಳನ್ನು ಅದಾನಿ ಗ್ರೂಪ್ ತಿರಸ್ಕರಿಸಿದೆ.